ತುಳುನಾಡಿನಲ್ಲಿ ದೈವಾರಾಧನೆ ಮತ್ತು ನಾಗಾರಾಧನೆಗಳಿಗೆ ವಿಶೇಷವಾದ ಮಹತ್ವ ಇರುವುದನ್ನು ಕಾಣಬಹುದು. ನಮ್ಮಲ್ಲಿ ನಾಗಾರಾಧನೆಯ ಪ್ರತೀಕವಾಗಿ ನಾಗಬನಗಳು ಅಲ್ಲಲ್ಲಿ ಕಾಣಸಿಗುತ್ತದೆ. ಹಿಂದಿನ ನಾಗಬನಗಳು ಗಿಡ ಮರಗಳಿಂದ ಕೂಡಿರುತ್ತಿತ್ತು ಮತ್ತು ಅವುಗಳ ಮದ್ಯೆ ನಾಗಶಿಲ್ಪಗಳನ್ನು ಪ್ರತಿಷ್ಟಾಪಿಸಲಾಗುತ್ತಿತ್ತು. ಒಂದು ಕಡೆ ಇದು ನಾಗಗಳಿಗೆ ಆಶ್ರಯ ತಾಣವಾಗಿದ್ದರೆ ಇನ್ನೊಂದೆಡೆ ವಿವಿಧ ಪಕ್ಷಿ ಸಂಕುಲವು ಅಲ್ಲಿ ನೆಲೆಸಿದ್ದನ್ನು ನಾವು ಕಾಣಬಹುದಿತ್ತು. ಆದರೆ ಇಂದು ಆದುನಿಕತೆಯ ವಿಜ್ರಂಭಣೆಯಲ್ಲಿ ನಾಗಬನಗಳು ಕಾಂಕ್ರೀಟೀಕರಣವಾಗಿರುವುದು ವಿಷಾದನೀಯ. ತುಳುನಾಡಿನ ಜನರಿಗೆ ಎಷ್ಟು ನಾಗನ ಮೇಲೆ ಭಕ್ತಿ ಇದೆಯೋ ಅಷ್ಟು ವಿಜ್ರಂಭಣೆಯಲ್ಲಿ ನಾಗಾರಾಧನೆ ಮಾಡುತ್ತಾರೆ ಎನ್ನುವುದಕ್ಕಿಂತ ಇಂದು ನಮ್ಮ ಸಂಪ್ರದಾಯವನ್ನೇ ಮರೆತು ಪೈಪೋಟಿಯಲ್ಲಿ ಇಂತಹ ಆಚರಣೆ ಮಾಡುವುದರಿಂದ ಕೆಲವು ಸಲ ಅತಿರೇಕ ಎನಿಸುವುದೂ ಉಂಟು. ಆದರೂ ಭಕ್ತಿ ಮತ್ತೆ ಅಲ್ಲಿ ಕರೆದುಕೊಂಡು ಹೊಗದೇ ಇರದು. ನಾಗಾರಾದನೆಯ ವಿವಿಧ ಆಚರಣೆಗಳಲ್ಲಿ ನಾಗರ ಪಂಚಮಿ ಆಚರಣೆಯೂ ಒಂದು. ನಾಗರ ಪಂಚಮಿ ಆಚರಣೆಯ ಪೌರಾಣಿಕ ಹಿನ್ನಲೆ ನೋಡುವುದಾದರೆ, ಹಿಂದೆ ಮಹಾಭಾರತ ಕಾಲದಲ್ಲಿ ಪರೀಕ್ಷಿತನ ಮಗನಾದ “ಜನಮೇಜಯ” ತನ್ನ ತಂದೆಯ ಮರಣಕ್ಕೆ ಸರ್ಪವೊಂದು ಕಾರಣವೆಂದು ತಿಳಿದು, ತಂದೆಯ ಸಾವಿನ ಹಗೆಯನ್ನು ಸಾಧಿಸುವುದಕ್ಕಾಗಿ ಸರ್ಪಕುಲವನ್ನೇ ನಾಶಪಡಿಸುವಂತಹ “ಸರ್ಪಯಾಗ”ವನ್ನು ಮಾಡುತ್ತಾನೆ. ಈ ಸರ್ಪಯಾಗದಲ್ಲಿ ಅನೇಕಾನೇಕ ಸರ್ಪಗಳು ಅಗ್ನಿದೇವನಿಗೆ ಅರ್ಪಿತವಾದುವು. ಕೊನೆಗೆ ತಕ್ಷಕನೆಂಬ ಸರ್ಪವು ಇಂದ್ರನ ಆಶ್ರಯದಲ್ಲಿ ಇದ್ದುದನ್ನು ಗಮನಿಸಿದ ಹೋತೃಗಳು, ಇಂದ್ರಸಮೇತ ತಕ್ಷಕನನ್ನು ಆಹ್ವಾನಿಸುತ್ತಾರೆ. ಇನ್ನೇನು ಇಂದ್ರಸಮೇತ ತಕ್ಷಕ ಅಗ್ನಿಗೆ ಬೀಳುವುದರಲ್ಲಿದ್ದಾಗ ಜರಾತ್ಕಾರುವಿನ ಮಗನಾದ ಅಸ್ತಿಕನೆಂಬ ಜ್ಞಾನಿಯು ಜನಮೇಜಯನಿಗೆ ಅವನ ತಂದೆಯ ಸಾವಿನ ನಿಜವಾದ ವಿಷಯ ತಿಳಿಸಿ ಯಾಗವನ್ನು ನಿಲ್ಲಿಸುತ್ತಾನೆ. ಇದರಿಂದ ಅಲ್ಪ ಸ್ವಲ್ಪ ನಾಗಗಳು ಬದುಕಿದವು ಹೀಗೆ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸಿದ ದಿನವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಆ ದಿನವನ್ನೇ "ನಾಗರ ಪಂಚಮಿ" ಎಂಬುದಾಗಿ ಆಚರಿಸಲಾಗುತ್ತದೆ. ಈ ದಿನ ನಾಗ ಸನ್ನಿಧಿಯಲ್ಲಿ ತನು ಎಂದರೆ ಹಾಲು, ಎಳನೀರು ಎರೆಯುವುದು ವಾಡಿಕೆ. ಇನ್ನು ತುಳುನಾಡಿನಲ್ಲಿ ಈ ದಿನ ತನ್ನ ಕುಟುಂಬದ ನಾಗಕ್ಕೆ ತನು ಎರೆದು ಬಂದು ಅರಶಿನ ಎಲೆಯ ಪತೋಲಿ ಎನ್ನುವ ಸಿಹಿ ಖಾಧ್ಯ ಸವಿಯುವುದು ಕೂಡ ಇಂದಿಗೂ ರೂಡಿಯಲ್ಲಿದೆ. ಈ ದಿನ ಹಾಲು, ಎಳನೀರಿನ ಜೊತೆಗೆ ಅರಶಿನ ಎಲೆಗೂ ಬಲುಬೇಡಿಕೆ.
✍ಲಲಿತಶ್ರೀ ಪ್ರೀತಂ ರೈ