ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿರುವುದರಿಂದ ವರಮಹಾಲಕ್ಮಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಅಭ್ಯಂಜನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು, ಹೆಣ್ಣು ಮಕ್ಕಳು ಮಡಿಯಲ್ಲಿ ನೈವೇದ್ಯವನ್ನು ತಯಾರಿಸುವುದು ರೂಡಿ. ಬಿಂದಿಗೆ ಅಥವ ಬೆಳ್ಳಿ ಚೆಂಬನ್ನು ಕಳಶದ ರೂಪದಲ್ಲಿಟ್ಟು, ಮಾವಿನ ಎಲೆಯನ್ನು ಕಳಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿನ, ಕುಂಕುಮ ಹಚ್ಚಿದ ತೆಂಗಿನಕಾಯಿ ಇಟ್ಟು, ಸೀರೆ, ಒಡವೆಗಳೊಂದಿಗೆ ಅಲಂಕರಿಸುತ್ತಾರೆ. ಕೆಲವರು ಲಕ್ಷ್ಮಿ ಮುಖವಾಡ ಇಟ್ಟರೆ ಇನ್ನು ಕೆಲವರು ತೆಂಗಿನಕಾಯಿಯನ್ನೆ ತಾಯಿಯ ಮುಖವಾಗಿ ಗ್ರಹಿಸಿ ಪೂಜಿಸುತ್ತಾರೆ. ಅವರವರ ಯಥಾಶಕ್ತಿಯಂತೆ ಲಕ್ಷ್ಮಿಯನ್ನು ಚಿನ್ನ, ಬೆಳ್ಳಿ, ಹೂವುಗಳೊಂದಿಗೆ ಅಲಂಕರಿಸಲಾಗುತ್ತದೆ. ಸಾಮನ್ಯವಾಗಿ ದಿನವೆಲ್ಲ ಉಪವಾಸ ಮಾಡಿ ವರಮಹಾಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಅಷ್ಟಲಕ್ಷ್ಮಿಯರಿಗೆ ಪೂಜೆ ಸಲ್ಲಿಸಿದಷ್ಟು ಫಲ ಎನ್ನುವ ನಂಬಿಕೆಯೂ ಇದೆ. ಅದಕ್ಕಾಗಿ ಸಾಯಂಕಾಲದ ಸಮಯ ಮುತ್ತೈದೆಯರನ್ನು ಕರೆದು ಕುಂಕುಮ ಪದ್ದತಿ ಇದೆ. ಲಕ್ಷ್ಮಿಗೆ ಪ್ರಿಯವಾದ ಕಡಲೆಬೇಳೆಯಿಂದ ತಯಾರಿಸಿದ ಸಿಹಿ ತಿನಿಸುಗಳನ್ನು ಅರ್ಪಿಸಿ, ಕುಂಕುಮಾರ್ಚನೆ ಮಾಡುವುದರೊಂದಿಗೆ ಲಕ್ಷ್ಮಿದೇವಿಯನ್ನು ಆವಾಹನೆ ಮಾಡುತ್ತಾರೆ ಪೂಜೆಯ ನಂತರ ಶ್ರೀ ವರಮಹಾಲಕ್ಷ್ಮಿ ವ್ರತ ಕಥಾ ಶ್ರವಣ ಮಾಡಿದವರಿಗೆ ದಾರಿದ್ರ‍್ಯ ಕಳೆದು, ಆಯಸ್ಸು, ಆರೋಗ್ಯ, ಸಂಪತ್ತು, ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ ನಂಬಿಕೆ. ಪೂಜೆಯ ನಂತರ ಮುತ್ತೈದೆಯರನ್ನು ಮನೆಗೆ ಕರೆದು ಅರಶಿನ ಕುಂಕುಮ ಹೂ ನೀಡಿ ಆಶೀರ್ವಾದ ಪಡೆಯಲು ಮರೆಯಬಾರದು. ಮುತ್ತೈದೆಯರ ರೂಪದಲ್ಲಿ ಅಷ್ಟಲಕ್ಷ್ಮಿಯರು ಮನೆಗೆ ಈ ಮೂಲಕ ಪ್ರವೇಶಿಸುತ್ತಾರೆ ಎನ್ನುವ ನಂಬಿಕೆ ಕೂಡ ಇದೆ.
ವರಮಹಾಲಕ್ಮಿ ಹಬ್ಬದ ಪೌರಾಣಿಕ ಹಿನ್ನೆಲೆ ತಿಳಿಯುವುದಾದರೆ ಈ ವ್ರತದ ಕಥೆಯು ವಿಷ್ಣು ಪುರಾಣ ಮತ್ತು ನಾರದ ಪುರಾಣಗಳಲ್ಲಿ ಕಂಡುಬರುತ್ತದೆ. ಶಿವನು ಪಾರ್ವತಿಗೆ ವರಮಹಾಲಕ್ಷ್ಮಿ ವ್ರತದ ಬಗ್ಗೆ ವಿವರಿಸಿದನಂತೆ ಚಾರುಮತಿ ಎಂಬ ಮಹಿಳೆ ತನ್ನ ಅತ್ತೆ-ಮಾವಂದಿರನ್ನು ಗೌರವಿಸಿ ಸೇವೆ ಮಾಡಿದ ಕಾರಣ, ಲಕ್ಷ್ಮಿ ದೇವಿ ಪ್ರಸನ್ನಳಾಗಿ ಇಷ್ಟಾರ್ಥ ಸಿದ್ದಿಗಾಗಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲು ಹೇಳಿದಳು. ಚಾರುಮತಿ ಈ ವ್ರತವನ್ನು ಆಚರಿಸಿದ ನಂತರ, ಅವಳ ಇಷ್ಟಾರ್ಥಗಳು ಈಡೇರಿದೆ ಎನ್ನುವುದು ನಂಬಿಕೆ.
ಎಲ್ಲರೂ ವಿಷ್ಣುವಿನ ಮನದರಸಿ ಲಕ್ಷ್ಮಿದೇವಿಯನ್ನು ಶ್ರದ್ಧೆ ಭಕ್ತಿಯೊಂದಿಗೆ ಆರಾಧಿಸಿ ತಾಯಿಯ ಕೃಪೆಗೆ ಪಾತ್ರರಾಗೋಣ.
✍ ಲಲಿತಶ್ರೀ ಪ್ರೀತಂ ರೈ