ಮಾರ್ಗಶಿರ ಮಾಸದಲ್ಲಿ ಬರುವ ಅಮಾವಾಸ್ಯೆ ತಿಥಿಯನ್ನು ಮಾರ್ಗಶಿರ ಅಮಾವಾಸ್ಯೆ ಅಥವಾ ಎಳ್ಳ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮಾರ್ಗಶಿರ ಅಮಾವಾಸ್ಯೆಯು ಬಹಳ ವಿಶೇಷವಾದ ದಿನವಾಗಿದ್ದು, ಈ ದಿನದಂದು ಪವಿತ್ರ ನದಿ ಸ್ನಾನವನ್ನು ಮಾಡುವುದು, ಪಿತೃಗಳಿಗೆ ಪ್ರಾರ್ಥನೆಯನ್ನು ಸಲ್ಲಿಸುವುದು, ದಾನ ಮಾಡುವುದು ಮತ್ತು ಸ್ವಯಂ ಶುದ್ಧೀಕರಣವನ್ನು ಮಾಡುವುದು ತುಂಬಾನೇ ವಿಶೇಷವೆನ್ನುವ ನಂಬಿಕೆಯಿದೆ. ಶಾಸ್ತ್ರದ ಪ್ರಕಾರ, ಮಾರ್ಗಶಿರ ಅಮಾವಾಸ್ಯೆ ದಿನದಂದು ಮಾಡುವ ದಾನ, ಉಪವಾಸ ಮತ್ತು ಪ್ರಾರ್ಥನೆಯು ನಾವು ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಪಾಪಗಳಿಂದ ಮುಕ್ತಿಯನ್ನು ನೀಡುತ್ತದೆ ಎನ್ನುವುದು ನಂಬಿಕೆ. ಈ ದಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮಾರ್ಗಶಿರ ಅಮಾವಾಸ್ಯೆಯ ದಿನದಂದು ಅಶ್ವತ್ಥ ಮರದ ಬಳಿ ದೀಪ ಹಚ್ಚಿದರೆ ಆರೋಗ್ಯ ವರ್ಧಿಸುತ್ತದೆ ಎನ್ನಲಾಗುತ್ತದೆ. ಈ ದಿನ ಸೂರ್ಯೋದಯಕ್ಕೆ ಮೊದಲು ಎದ್ದು ನದಿಯಲ್ಲಿ ಸ್ನಾನ ಮಾಡುವುದರಿಂದ ವಿಶೇಷ ಫಲಿತಾಂಶ ಬರುತ್ತದೆ. ಈ ದಿನದಂದು ವಿಷ್ಣುವನ್ನು ಪೂಜಿಸಬೇಕು. ವಿಷ್ಣುವನ್ನು ನದಿ ನೀರಿನಿಂದ ಪೂಜಿಸಬೇಕು. ವಿಷ್ಣುವಿನ ವಿಗ್ರಹಕ್ಕೆ ನೈವೇದ್ಯ ಅರ್ಪಿಸಿ ಆರತಿ ಮಾಡಬೇಕು. ಮಾರ್ಗಶಿರ ಅಮಾವಾಸ್ಯೆಯಂದು ವಿಷ್ಣುವನ್ನು ಅತ್ಯಂತ ಭಕ್ತಿಯಿಂದ ಪೂಜಿಸಿ ಉಪವಾಸ ಮಾಡುವುದರಿಂದ ಜಾತಕದಲ್ಲಿನ ಕಾಲಸರ್ಪ ದೋಷ ದೂರವಾಗುತ್ತದೆ. ಈ ದಿನ ಸೂರ್ಯನಿಗೆ ಹಿಟ್ಟಿನ ದೀಪಗಳು ಮತ್ತು ಕುಂಭ ದೀಪಗಳನ್ನು ಬೆಳಗಿಸಿ ಪೂಜಿಸುವುದರಿಂದ ಉತ್ತಮ ಫಲ ದೊರೆಯುತ್ತದೆ ಎನ್ನಲಾಗುತ್ತದೆ.
ಕಪ್ಪು ಎಳ್ಳು ನಮ್ಮ ಪಿತೃಗಳಿಗೆ ತುಂಬಾನೇ ಪ್ರಿಯವಾದ ವಸ್ತುವಾಗಿದೆ. ಎಳ್ಳು ಶನಿದೇವನಿಗೂ ಪ್ರಿಯವಾಗಿದೆ. ಹಾಗಾಗಿ, ಮಾರ್ಗಶಿರ ಅಮಾವಾಸ್ಯೆಯ ದಿನದಂದು ನಾವು ಎಳ್ಳನ್ನು ಅಥವಾ ಎಳ್ಳಿನಿಂದ ಮಾಡಿದ ನೈವೇದ್ಯವನ್ನು ಪಿತೃಗಳ ಹೆಸರಿನಲ್ಲಿ ಅರ್ಪಿಸುವುದರಿಂದ ಅದು ನೇರವಾಗಿ ಪಿತೃಲೋಕವನ್ನು ಸೇರುತ್ತದೆ ಎನ್ನುವ ನಂಬಿಕೆಯಿದೆ. ಇದರಿಂದ ಪಿತೃ ದೋಷದಿಂದ ಮುಕ್ತಿಯನ್ನು ಪಡೆದು, ನೀವು ಕುಟುಂಬದಲ್ಲಿನ ದುಃಖ ಪರಿಹಾರವಾಗುವುದು ಎನ್ನಲಾಗುತ್ತದೆ.
ಶಾಸ್ತ್ರಗಳಲ್ಲಿ ಮತ್ತು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಆಹಾರವನ್ನು ಮತ್ತು ಆಹಾರ ಧಾನ್ಯಗಳನ್ನು ದಾನ ಮಾಡುವುದು ಶ್ರೇಷ್ಠ ದಾನವೆಂದು ಪರಿಗಣಿಸಲಾಗುತ್ತದೆ. ಮಾರ್ಗಶಿರ ಅಮಾವಾಸ್ಯೆಯ ದಿನದಂದು ಅನ್ನದಾನ ಸೇರಿದಂತೆ ವಿವಿಧ ಆಹಾರ ವಸ್ತುಗಳನ್ನು ದಾನ ಮಾಡುವ ಮೂಲಕ ಪಿತೃಗಳನ್ನು ಸಂತುಷ್ಟಗೊಳಿಸಬಹುದು. ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹಾರ ಮಾಡುವುದು. ಸಾಲದಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ ಎನ್ನುವುದು ನಂಬಿಕೆ. ಈ ದಿನದಂದು ನೀವು ಅಕ್ಕಿಯನ್ನು, ಬಾರ್ಲಿಯನ್ನು, ಗೋಧಿ ಸೇರಿದಂತೆ ಮುಂತಾದ ಆಹಾರ ವಸ್ತುಗಳನ್ನು ದಾನ ಮಾಡಬೇಕು.
ಈ ದಿನದಂದು ಸಿಹಿಯಾದ ಬೆಲ್ಲವನ್ನು ದಾನ ಮಾಡುವುದು ತುಂಬಾನೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ ಈ ದಿನ ಬೆಲ್ಲವನ್ನು ದಾನ ಮಾಡುವುದರಿಂದ ಜಾತಕದಲ್ಲಿ ಗುರು ಮತ್ತು ಸೂರ್ಯನ ಸ್ಥಾನವು ಬಲಗೊಳ್ಳುವುದು.
ಈ ಅಮಾವಾಸ್ಯೆಯ ದಿನದಂದು ಅಗತ್ಯವಿರುವವರಿಗೆ ಬಟ್ಟೆಯನ್ನು, ಕಂಬಳಿಯನ್ನು ಅಥವಾ ಬೆಚ್ಚಗಿನ ಉಣ್ಣೆಯ ಬಟ್ಟೆಯನ್ನು ದಾನ ಮಾಡಬಹುದು. ಇದನ್ನು ಅತ್ಯಂತ ಪುಣ್ಯ ಕಾರ್ಯವೆಂದು ಪರಿಗಣಿಸಲಾಗುತ್ತದೆ.
✍ ಲಲಿತಶ್ರೀ ಪ್ರೀತಂ ರೈ