image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಕೃಷಿ

ಮೆಕ್ಕೆಜೋಳವನ್ನು ಕಡ್ಡಾಯವಾಗಿ ಖರೀದಿ ಮಾಡುವಂತೆ ಡಿಸ್ಟಿಲರಿಗಳಿಗೆ ಆದೇಶ ಹೊರಡಿಸಿದ ಸರ್ಕಾರ

ಮೆಕ್ಕೆಜೋಳವನ್ನು ಕಡ್ಡಾಯವಾಗಿ ಖರೀದಿ ಮಾಡುವಂತೆ ಡಿಸ್ಟಿಲರಿಗಳಿಗೆ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಮೆಕ್ಕೆಜೋಳವನ್ನು ಕಡ್ಡಾಯವಾಗಿ ಖರೀದಿ ಮಾಡುವಂತೆ ಡಿಸ್ಟಿಲರಿಗಳಿಗೆ ಆದೇಶ ಹೊರಡಿಸಿರುವ ಸರ್ಕಾರ ಡಿ.1ರಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ರೈತರಿಂದ ಮೆಕ್ಕೆಜೋಳ ಖರೀದಿಸಲು ಉತ್ತರ ಕರ್ನಾಟಕದ ಮೂರು ಜಿಲ್ಲೆಗಳ 5 ಡಿಸ್ಟಿಲರಿಗಳ ಹೆಸರು, ಖರೀದಿ ಮಾಡಬೇಕಾದ ಪ್ರಮಾಣವನ್ನೂ ನಿಗದಿ ಮಾಡಲಾಗಿದೆ. 'ಧಾನ್ಯ ಆಧಾರಿತ ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಮೊದಲ ತ್ರೈಮಾಸಿಕದಲ್ಲಿ ಅಂದರೆ 2026ರ ಜ.26ರವರೆಗೆ 44,892 ಮೆಟ್ರಿಕ್ ಟನ್ ಮೆಕ್ಕೆಜೋಳ ಅಗತ್ಯವಿದೆ. ಇದರಲ್ಲಿ ಶೇ 50ರಷ್ಟು 22,446 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಲ್ಲವೇ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘಗಳ ಮೂಲಕ ಖರೀದಿಸಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಡಿಸ್ಟಿಲರಿಗಳ ಗೋದಾಮುಗಳಿಗೆ ಸರಬರಾಜು ಮಾಡಬೇಕು' ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೆಕ್ಕೆಜೋಳ ಬೆಳೆದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದರು. ಮೆಕ್ಕೆಜೋಳಕ್ಕೆ ಹೆಚ್ಚುವರಿ ಬೆಲೆ ಘೋಷಿಸಿ, ಖರೀದಿ ಮಾಡಬೇಕೆಂದು ಹೋರಾಟವನ್ನೂ ನಡೆಸಿದ್ದರು. ಈ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಸಭೆ ನಡೆಸಿದ್ದರು. ಸಭೆಯ ತೀರ್ಮಾನದಂತೆ, ಸಹಕಾರ ಇಲಾಖೆಯು ಖರೀದಿ ಪ್ರಕ್ರಿಯೆ, ನಿಗದಿತ ಡಿಸ್ಟಿಲರಿಗಳು, ಖರೀದಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಪ್ರಮಾಣಿತ ಕಾರ್ಯ ವಿಧಾನ (ಎಸ್‌ಒಪಿ) ಕುರಿತ ಆದೇಶ ಹೊರಡಿಸಿದೆ. 'ಸೋಮವಾರದಿಂದಲೇ ಖರೀದಿಗೆ ರೈತರ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಮೂರು ದಿನದ ಬಳಿಕ ನೋಂದಣಿ ಜತೆಗೆ ಖರೀದಿ ಎರಡೂ ಪ್ರಕ್ರಿಯೆಗಳು ಮುಂದುವರಿಯಲಿವೆ. ಜಿಲ್ಲಾಧಿಕಾರಿ, ಅಬಕಾರಿ ಇಲಾಖೆ ಜಿಲ್ಲಾಧಿಕಾರಿ, ಸಹಕಾರ ಇಲಾಖೆಯ ಜಿಲ್ಲಾ ನಿಬಂಧಕರು ಖರೀದಿ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸುವಂತೆ ಸೂಚಿಸಲಾಗಿದೆ' ಎಂದು ಸಹಕಾರ ಇಲಾಖೆ ತನ್ನ ಆದೇಶದಲ್ಲಿ ಹೇಳಿದೆ.

Category
ಕರಾವಳಿ ತರಂಗಿಣಿ