ರಾಜ್ಗೀರ್: ಬಿಹಾರದ ರಾಜ್ಗೀರ್ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಚೀನದ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ ಪುರುಷರ ತಂಡ 10ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ 7-0 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಪಂದ್ಯ ಆರಂಭವಾದ ಬಳಿಕ 4ನೇ ನಿಮಿಷದಲ್ಲೇ ಭಾರತದ ಪರ ಮೊದಲ ಗೋಲು ದಾಖಲಾಯಿತು. ಶಿಲಾನಂದ್ ಲಕ್ರಾ ಗೋಲು ಬಾರಿಸಿದರು. ಇದಾದ ಬಳಿಕ 7ನೇ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್, 18ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್, 37ನೇ ನಿಮಿಷದಲ್ಲಿ ರಾಜ್ಕುಮಾರ್ ಪಾಲ್, 39ನೇ ನಿಮಿಷದಲ್ಲಿ ಸುಖಜೀತ್ ಸಿಂಗ್ ಗೋಲು ಬಾರಿಸಿದರು. ಆ ಬಳಿಕ 46 ಮತ್ತು 50ನೇ ನಿಮಿಷದಲ್ಲಿ ಅಭಿಷೇಕ್ ಅವಳಿ ಗೋಲುಗಳನ್ನು ಬಾರಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಈ ಮೊದಲು ನಡೆದ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸೆಣಸಾಡಿದ ದ.ಕೊರಿಯಾ 4-3 ಗೋಲುಗಳ ಅಂತರದಿಂದ ಜಯ ಸಾಧಿಸಿ ಫೈನಲ್ಗೆ ಪ್ರವೇಶ ಪಡೆದುಕೊಂಡಿತು. ಕೊರಿಯಾ ಕಳೆದ ಬಾರಿಯ ಚಾಂಪಿಯನ್ ಆಗಿದ್ದು ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ರವಿವಾರ ಸಾಯಂಕಾಲ 7.30ಕ್ಕೆ ಫೈನಲ್ ಪಂದ್ಯ ಆರಂಭವಾಗಲಿದೆ. 10 ಬಾರಿ ಭಾರತ ಫೈನಲ್ ಪ್ರವೇಶಿಸಿದ್ದು, 3 ಬಾರಿ ಚಾಂಪಿಯನ್ ಆಗಿದೆ. ಈ ಬಾರಿ 4ನೇ ಪ್ರಶಸ್ತಿಯ ಮೇಲೆ ಭಾರತ ಕಣ್ಣಿಟ್ಟಿದೆ. 2003ರಲ್ಲಿ ಪಾಕಿಸ್ಥಾನದ ವಿರುದ್ಧ, 2007ರಲ್ಲಿ ದ.ಕೊರಿಯಾ ವಿರುದ್ಧ, 2017ರಲ್ಲಿ ಬಾಂಗ್ಲಾ ವಿರುದ್ಧದ ಫೈನಲ್ನಲ್ಲಿ ಭಾರತ ಗೆಲುವು ಸಾಧಿಸಿತ್ತು.