ದಕ್ಷಿಣ ಕೊರಿಯಾ : ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ಕಾಂಪೌಂಡ್ ತಂಡ ಮೊದಲ ಬಂಗಾರ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ರವಿವಾರದ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಜಯ ಸಾಧಿಸಿ ಚಿನ್ನದೊಂದಿಗೆ ಮಿನುಗಿತು. ರಿಷಭ್ ಯಾದವ್, ಅಮಾನ್ ಸೈನಿ ಮತ್ತು ಪ್ರಥಮೇಶ್ ಫುಗೆ ಅವರನ್ನೊಳಗೊಂಡ ಭಾರತ ತಂಡ ಫ್ರಾನ್ಸ್ ವಿರುದ್ಧ 235-233 ಅಂಕಗಳ ಗೆಲುವು ಸಾಧಿಸಿತು. ಫೈನಲ್ ಹಣಾಹಣಿ ಅತ್ಯಂತ ರೋಚಕವಾಗಿತ್ತು. 3 ಸೆಟ್‌ಗಳ ಅಂತ್ಯಕ್ಕೆ ಎರಡೂ ತಂಡಗಳು 176-176 ಅಂಕಗಳ ಸಮಬಲ ಸಾಧಿಸಿದ್ದವು. ಅನಂತರದ ನಿರ್ಣಾಯಕ ಸುತ್ತಿನಲ್ಲಿ ದ್ವಿತೀಯ ಶ್ರೇಯಾಂಕದ ಭಾರತ 59-57 ಅಂಕಗಳ ಮೇಲುಗೈ ಸಾಧಿಸಿ ಚಿನ್ನವನ್ನು ತನ್ನದಾಗಿಸಿಕೊಂಡಿತು. ಫೈನಲ್ ಹಾದಿಯಲ್ಲಿ ಭಾರತ ತಂಡ ಆಸ್ಟ್ರೇಲಿಯ, ಪವರ್‌ಹೌಸ್ ಯುಎಸ್‌ಎ ಮತ್ತು ಟರ್ಕಿಯನ್ನು ಪರಾಭವಗೊಳಿಸಿತ್ತು. ಇದಕ್ಕೂ ಮುನ್ನ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ವೆನ್ನಮ್-ರಿಷಭ್ ಯಾದವ್ ಜೋಡಿಗೆ ಇತಿಹಾಸ ನಿರ್ಮಿಸುವ ಅವಕಾಶ ಎದುರಾಗಿತ್ತು. ಆದರೆ ನೆದರ್ಲೆಂಡ್ಸ್ ಎದುರಿನ ಫೈನಲ್‌ನಲ್ಲಿ ಇವರು 155-157 ಅಂಕಗಳ ಅಂತರದಿಂದ ಎಡವಿದರು. ಆದರೆ ರಿಷಭ್ ಯಾದವ್ ಚಿನ್ನದ ಕೊರತೆಯನ್ನು ಪುರುಷರ ಕಾಂಪೌಂಡ್ ಫೈನಲ್‌ನಲ್ಲಿ ನೀಗಿಸಿಕೊಂಡರು.