ಇಸ್ಲಾಮಾಬಾದ್ : ಏಷ್ಯಾ ಕಪ್ 2025ರ ಫೈನಲ್ ನಲ್ಲಿ ಭಾರತ ವಿರುದ್ಧ ಪರಾಭವಗೊಂಡ ಹತಾಷೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ತನ್ನ ಆಟಗಾರರು ವಿದೇಶಿ ಲೀಗ್ ಗಳಲ್ಲಿ ಆಡುವುದಕ್ಕೆ ಅಂಕುಶ ಹಾಕಲು ಹೊರಟಿದೆ. ವಿದೇಶಿ ಲೀಗ್ ಗಳಲ್ಲಿ ಆಡಲು ಅಲ್ಲಿನ ಕ್ರಿಕೆಟಿಗರಿಗೆ ನೀಡಲಾಗಿದ್ದ ನಿರಾಕ್ಷೇಪಣಾ ಪತ್ರ(NOC) ಗಳನ್ನು ರದ್ದುಗೊಳಿಸಿದೆ. ಜೊತೆಗೆ ಹೊಸದಾಗಿ ನಿರಾಕ್ಷೇಪಣಾ ಪತ್ರಗಳನ್ನೂ ನೀಡಲು ನಿರಾಕರಿಸಿದೆ. ಹೀಗಾಗಿ ಪಾಕ್ ನ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಮೊಹಮ್ಮದ್ ರಿಝ್ವಾನ್, ಶಾಹಿನ್ ಶಾ ಅಫ್ರಿದಿ ಸೇರಿದಂತೆ ಅನೇಕ ಕ್ರಿಕೆಟಿಗರಿಗೆ ತೊಂದರೆ ಆಗುವ ಎಲ್ಲಾ ಸಾಧ್ಯತೆ ಇದೆ. ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ಮತ್ತು ಮೈದಾನದ ಹೊರಗಿನ ವಿವಾದಗಳು ಹೆಚ್ಚಾಗಿದ್ದರಿಂದ ಪಿಸಿಬಿಯು ಈ ಕ್ರಮಕ್ಕೆ ಮುಂದಾಗಿದೆ. ನಿರಂತರ ಸೋಲುಗಳಿಂದ ಕಂಗೆಟ್ಟಿರುವ ಮಂಡಳಿ ಇದೀಗ ಪಾಕಿಸ್ತಾನ ತಂಡದ ಪುನರ್ ನಿರ್ಮಾಣಕ್ಕೆ ಹೊರಟಿದ್ದು ಮಂಗಳವಾರದಂದು ಈ ಮಹತ್ವದ ನಿರ್ದಾರವನ್ನು ಪ್ರಕಟಿಸಿದೆ. ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (COO) ಸುಮೇರ್ ಅಹ್ಮದ್ ಸೈಯದ್ ಅವರು ಈ ಬಗ್ಗೆ ಅಧಿಸೂಚನೆ ಸಹ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ "ವಿದೇಶಿ ಲೀಗ್‌ಗಳು ಮತ್ತು ಪಂದ್ಯಾವಳಿಗಳಲ್ಲಿ ಭಾಗವಹಿಸಲು ನೀಡಲಾದ ಎಲ್ಲಾ NOC ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆ." ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಭಾರತದೊಂದಿಗೆ ಭವಿಷ್ಯದಲ್ಲಿ ಕ್ರಿಕೆಟ್ ಆಡುವುದಿಲ್ಲ ಎಂದು ತಿಳಿಸಿತ್ತು.
ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ಧ ಫೈನಲ್ ಸೇರಿ ಆಡಿದ ಮೂರು ಪಂದ್ಯಗಳನ್ನು ಸಹ ಪಾಕಿಸ್ತಾನ ತಂಡ ಸೋತಿದೆ. ಜೊತೆಗೆ ನೋ ಶೇಕ್ ಹ್ಯಾಂಡ್ ಅಭಿಯಾನದಿಂದಾಗಿ ಅವಮಾನ ಅನುಭವಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೊದಲನೆಯದಾಗಿ ಭಾರತ ತಂಡದ ವಿರುದ್ಧ ಭವಿಷ್ಯದಲ್ಲಿ ಕ್ರಿಕೆಟ್ ಆಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿತ್ತು. ಇದೀಗ ತನ್ನ ಆಟಗಾರರು ವಿದೇಶಿ ಲೀಗ್ ಗಳಲ್ಲಿ ಆಡುವುದರಕ್ಕೆ ಅಂಕುಶ ಹಾಕಿದೆ. ಇದೀಗ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೂರೂ ಮಾದರಿಯ ಸರಣಿಗೆ ಸಿದ್ಧವಾಗುತ್ತಿದೆ. ಪಿಸಿಬಿಯ ಈ ನಿರ್ಧಾರ ಪಾಕಿಸ್ತಾನದ ಕೆಲವು ಆಟಗಾರರಿಗೆ ಸಮಸ್ಯೆ ತಂದೊಡ್ಡುವ ಸಾಧ್ಯತೆಗಳಿವೆ. ಕ್ರಿಕ್ ಇನ್ಫೋ ವರದಿಯ ಪ್ರಕಾರ ಬಾಬರ್ ಆಝಂ, ಮೊಹಮ್ಮದ್ ರಿಜ್ವಾನ ಮತ್ತು ಶಾಹಿನ್ ಶಾ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಏಳು ಮಂದಿ ಆಟಗಾರರು ಈ ಬಾರಿ ಡಿಸೆಂಬರ್ ನಲ್ಲಿ ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದೀಗ ನಿರಾಕ್ಷೇಪಣಾ ಪತ್ರಗಳನ್ನು ರದ್ದುಗೊಳಿಸಿರುವುದರಿಂದ ದೊಡ್ಡ ಹಿನ್ನಡೆಯಾಗಿದೆ. ಆ ಆಟಗಾರರಿಗೆ ವಿದೇಶಿ ಲೀಗ್ ನ ಅನುಭವ ಮತ್ತು ದೊಡ್ಡ ಪ್ಯಾಕೇಜ್ ಕೈತಪ್ಪಲಿದೆ.