ರಾಂಚಿ: ಏಕದಿನ ಕ್ರಿಕೆಟ್ ಮಾದರಿಯ 'ದಿಗ್ಗಜ ಜೋಡಿ' ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಬ್ಬರದ ಆಟಕ್ಕೆ ಜಯ ಒಲಿಯಿತು. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ಎದುರು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 17 ರನ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಇದಕ್ಕೆ ಪ್ರಮುಖವಾಗಿ ಕಾರಣವಾಗಿದ್ದು ವಿರಾಟ್ ಮತ್ತು ರೋಹಿತ್ ಅವರ ಅಮೋಘ ಬ್ಯಾಟಿಂಗ್. ಏಕದಿನ ಕ್ರಿಕೆಟ್‌ನಲ್ಲಿ 52ನೇ ಶತಕ ದಾಖಲಿಸಿದರು. ರೋಹಿತ್ 60ನೇ ಅರ್ಧಶತಕ ಹೊಡೆದರು. ಇಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 136 ರನ್‌ಗಳನ್ನೂ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 349 ರನ್ ಗಳಿಸಿತು.
ಆದರೆ ಪ್ರವಾಸಿ ತಂಡದ ಕೆಳಕ್ರಮಾಂಕದ ಬ್ಯಾಟರ್‌ಗಳಾದ ಮಾರ್ಕೊ ಯಾನ್ಸೆನ್ (70; 39ಎ) ಮತ್ತು ಕಾರ್ಬಿನ್ ಬಾಷ್ (67; 51ಎ) ದಿಟ್ಟ ಹೋರಾಟದ ಮೂಲಕ ಭಾರತ ತಂಡದಿಂದ ಗೆಲುವು ಕಸಿದುಕೊಳ್ಳುವ ಬೆದರಿಕೆ ಒಡ್ಡಿದ್ದರು. ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಅನುಭವಿ ಬೌಲರ್‌ಗಳ ಗೈರು ಈ ಹಂತದಲ್ಲಿ ಕಾಡಿತ್ತು. ಆದರೆ ಕುಲದೀಪ್ ಯಾದವ್ (68ಕ್ಕೆ4) ಮತ್ತು ಹರ್ಷಿತ್ ರಾಣಾ (65ಕ್ಕೆ3) ತುಸು ದುಬಾರಿಯಾದರೂ ವಿಕೆಟ್ ಉರುಳಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು 332 ರನ್‌ಗಳಿಗೆ ಆಲೌಟ್ ಆಯಿತು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭದಲ್ಲಿಯೇ ಆಘಾತವಾಯಿತು. ಹರ್ಷಿತ್ ರಾಣಾ ಅವರು ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ರಿಯಾನ್ ರಿಕೆಲ್ಟನ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಕಬಳಿಸಿದರು. ಇಬ್ಬರೂ ಬ್ಯಾಟರ್‌ಗಳು ಖಾತೆ ತೆರೆಯದೇ ನಿರ್ಗಮಿಸಿದರು. ಇನ್ನೊಂದೆಡೆ ಎಡಗೈ ವೇಗಿ ಆರ್ಷದೀಪ್ ಸಿಂಗ್ ಅವರು ಏಡನ್ ಮರ್ಕರಂ ವಿಕೆಟ್ ಗಳಿಸಿದರು. ಇದರಿಂದಾಗಿ ತಂಡವು 11 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಭಾರತ ತಂಡದ ಹಂಗಾಮಿ ನಾಯಕ ಮತ್ತು ವಿಕೆಟ್‌ಕೀಪರ್ ಕೆ.ಎಲ್. ರಾಹುಲ್ ಅವರು ಮರ್ಕರಂ ಮತ್ತು ಕ್ವಿಂಟನ್ ಅವರ ಕ್ಯಾಚ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ರಾಹುಲ್ (60; 56ಎ, 4X2, 6X3) ಅರ್ಧಶತಕ ಹೊಡೆದು ತಂಡದ ಮೊತ್ತ ಹೆಚ್ಚಲು ಕಾರಣರಾದರು. ರವೀಂದ್ರ ಜಡೇಜ 20 ಎಸೆತಗಳಲ್ಲಿ 32 ರನ್ ಹೊಡೆದು ಉಪಯುಕ್ತ ಕಾಣಿಕೆ ನೀಡಿದರು.
ಆದರೆ ಮ್ಯಾಥ್ಯೂ ಬ್ರೀಜ್ಕೆ (72; 80ಎ) ಅವರು ತುಸು ಚೇತರಿಕೆ ನೀಡಿದರು. ಅವರಿಗೆ ಟೋನಿ ಡಿ ಝಾರ್ಜಿ (39; 35ಎ) ಮತ್ತು ಡೆವಾಲ್ಡ್ ಬ್ರೆವಿಸ್ (37 ರನ್) ಜೊತೆ ನೀಡಿದರು. ಅವರನ್ನೂ ಕಟ್ಟಿಹಾಕುವಲ್ಲಿ ಕುಲದೀಪ್ ಯಾದವ್ ಮತ್ತು ಹರ್ಷಿತ್ ಯಶಸ್ವಿಯಾದರು. ಆದರೆ ಮಾರ್ಕೊ ಅವರ ಅಬ್ಬರಕ್ಕೆ ಬೌಲರ್‌ಗಳು ಬಸವಳಿದರು. 39 ಎಸೆತಗಳಲ್ಲಿ 70 ರನ್ ಗಳಿಸಿದ ಯಾನ್ಸೆನ್ 8 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಕಾರ್ಬಿನ್ ಬಾಷ್ ಕೊನೆಯವರಾಗಿ ಔಟಾಗುವವರೆಗೂ ತಂಡದ ಗೆಲುವಿನ ಆಸೆ ಜೀವಂತವಾಗಿತ್ತು. ಅವರ ವಿಕೆಟ್ ಪಡೆಯುವಲ್ಲಿ ಕನ್ನಡಿಗ ಪ್ರಸಿದ್ಧಕೃಷ್ಣ ಕೊನೆಯ ಓವರ್‌ನಲ್ಲಿ ಸಫಲರಾದರು.