ಮೂಡುಬಿದಿರೆ: ಕರ್ನಾಟಕ ಸರಕಾರದ ಯುವಸಬಲೀಕರಣ ಕ್ರೀಡಾ ಇಲಾಖೆ, ಕ್ರೀಡಾ ಕ್ಷೇತ್ರದಲ್ಲಿ ಮಹೋನ್ನತವಾದ ಗಣನೀಯ ಸಾಧನೆಗೈದ ಕ್ರೀಡಾ ಪಟುಗಳಿಗೆ ಕೊಡಮಾಡುವ ರಾಜ್ಯದ ಅತ್ಯುನ್ನತ ಕ್ರೀಡಾ ಪ್ರಶಸ್ತಿ- ಏಕಲವ್ಯ ಪ್ರಶಸ್ತಿ, 2022-23ನೇ ಸಾಲಿನಲ್ಲಿ ವೇಯ್ಟ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಸಾಧನೆಗೈದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಷಾ ಬಿ. ಎನ್. ಹಾಗೂ 2023ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ನಾಲ್ವರು ಕ್ರೀಡಾಪಟುಗಳಾದ ದಿವ್ಯ, ಮೇಘನಾ, ಶಂಕ್ರಪ್ಪ ಹಾಗೂ ಆತ್ಮೀಯಾ ಕ್ರಮವಾಗಿ ಇರ್ವರು ಬಾಲ್‌ಬ್ಯಾಡ್‌ಮಿಂಟನ್, ಮಲ್ಲಕಂಬ ಹಾಗೂ ಕಬಡ್ಡಿ ವಿಭಾಗದಲ್ಲಿ ಆಯ್ಕೆಯಾಗಿ ಸೋಮವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಈ ಬಾರಿಯ ಏಕಲವ್ಯ ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯು ಸೇರಿದಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಒಟ್ಟು 6 ಜನರಿಗೆ ಏಕಲವ್ಯ ಪ್ರಶಸ್ತಿ ಹಾಗೂ 25 ಜನರಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಲಭಿಸುತ್ತಿದೆ. ಬಾಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಆಳ್ವಾಸ್‌ಗೆ ಇದುವರೆಗೆ ಒಟ್ಟು 11 ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಲಭಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಏಕಲವ್ಯ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಮಟ್ಟದ ವೇಟ್‌ಲಿಫ್ಟಿಂಗ್ ಕ್ರೀಡಾಪಟುವಾಗಿರುವ ಉಷಾ ಬಿ.ಎನ್. ಮೂಲತಃ ಹಾಸನದವರು. ಇಂಗ್ಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ 6ನೇ ಸ್ಥಾನ, ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ, ಸೀನಿಯರ್ ನ್ಯಾಷನಲ್ ವೇಟ್ ಲಿಫ್ಟಿಂಗ್‌ನಲ್ಲಿ 3 ಚಿನ್ನ ಹಾಗೂ 3 ಕಂಚು, ನ್ಯಾಷನಲ್ ಗೇಮ್ಸ್ನಲ್ಲಿ 2 ಬೆಳ್ಳಿ, ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ 4 ಚಿನ್ನ ಹಾಗೂ 1 ಬೆಳ್ಳಿ, ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 2023ರಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ ನೀಡುವ ಕೆಒಎ ಪ್ರಶಸ್ತಿಗೆ ಭಾಜನರಾಗಿದ್ದರೆ.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಶಂಕರಪ್ಪ (ಮಲ್ಲಕಂಬ), ದಿವ್ಯ ಎಂಎಸ್ (ಬಾಲ್ ಬ್ಯಾಡ್ಮಿಂಟನ್), ಮೇಘನಾ ಎಚ್. ಎಮ್ (ಬಾಲ್ ಬ್ಯಾಡ್ಮಿಂಟನ್), ಆತ್ಮೀಯ ಎಂ.ಬಿ. (ಕಬಡ್ಡಿ) ಭಾಜಾನರಾಗಿದ್ದಾರೆ.
ಶಂಕರಪ್ಪ ದೇಶಿಯ ಕ್ರೀಡೆ ಮಲ್ಲಕಂಬದ ಕ್ರೀಡಾಪಟು. ಮೂಲತಃ ಬಳ್ಳಾರಿಯವರು. ಅಖಿಲ ಭಾರತ ಅಂತರ್ ವಿವಿ ಮಲ್ಲಕಂಬ ಚಾಂಪಿಯನ್ಶಿಪ್‌ನಲ್ಲಿ ಕಂಚಿನ ಪದಕ, ಗುಜರಾತಿನಲ್ಲಿ ನಡೆದ ನ್ಯಾಷನಲ್ ಗೇಮ್ಸ್, ಅಖಿಲ ಭಾರತ ಅಂತರ್ ವಿವಿ ಮಲ್ಲಕಂಬ ಸ್ಪರ್ಧೆ ಹಾಗೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ ಭಾಗವಹಿಸಿದ್ದಾರೆ. ರಾಜ್ಯ ಮಟ್ಟದಲ್ಲಿ 4 ಚಿನ್ನ, 3 ಬೆಳ್ಳಿ, 1 ಕಂಚು, ಮೊದಲ ಸೌತ್ ಝೋನ್ ಮಲ್ಲಕಂಬ ಚಾಂಪಿಯನ್ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿರುವ ದಿವ್ಯ ಎಂ ಎಸ್ ಮೂಲತಃ ಕೆ. ಆರ್. ಪೇಟೆ ಮಂಡ್ಯದವರಾಗಿದ್ದು, 6 ಬಾರಿ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಚಿನ್ನದ ಪದಕ ಸೀನಿಯರ್ ನ್ಯಾಷನಲ್ಸ್ ಬಾಲ್ ಬ್ಯಾಡ್ಮಿಂಟನ್ ನಲ್ಲಿ 2 ಚಿನ್ನ ಹಾಗೂ 2 ಬೆಳ್ಳಿ, 4 ಬಾರಿ ಫೆಡರೇಷನ್ ಕಪ್ ನಲ್ಲಿ ಚಿನ್ನದ ಪದಕ, ಜೂನಿಯರ್ ನ್ಯಾಷನಲ್ಸ್ ಬಾಲ್ ಬ್ಯಾಡ್ಮಿಂಟನ್ ನಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ ಪದಕಗಳಿಸಿದ್ದಾರೆ.
ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿರುವ ಮೇಘನಾ ಎಚ್. ಎಮ್. ಮೂಲತಃ ತುಮಕೂರಿನವರಾಗಿದ್ದು, 6 ಬಾರಿ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಚಿನ್ನದ ಪದಕ, ಸೀನಿಯರ್ ನ್ಯಾಷನಲ್ಸ್ ಬಾಲ್ ಬ್ಯಾಡ್ಮಿಂಟನ್‌ನಲ್ಲಿ 2 ಚಿನ್ನ ಹಾಗೂ 2 ಬೆಳ್ಳಿ, 4 ಬಾರಿ ಫೆಡರೇಷನ್ ಕಪ್ ನಲ್ಲಿ ಚಿನ್ನದ ಪದಕ, ಜೂನಿಯರ್ ನ್ಯಾಷನಲ್ಸ್ ಬಾಲ್ ಬ್ಯಾಡ್ಮಿಂಟನ್‌ನಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ ಪದಕಗಳಿಸಿದ್ದಾರೆ.
ಹಾಸನ ಮೂಲದ ಆತ್ಮೀಯ ಎಂ.ಬಿ. ರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟು. 38ನೇ ರಾಷ್ಟ್ರೀಯ ಗೇಮ್ಸ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ, 70ನೇ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಸೀನಿಯರ್ ಭಾರತೀಯ ಮಹಿಳಾ ತರಬೇತಿ ಶಿಬಿರಕ್ಕೆ ಆಯ್ಕೆ, 69ನೇ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡದ ಕ್ಯಾಪ್ಟನ್ ಆಗಿ ಭಾಗವಹಿಸಿದ್ದಾರೆ, 2 ಬಾರಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಪ್ರಥಮ ಸ್ಥಾನ, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ ಭಾಗವಹಿಸಿದ್ದಾರೆ. ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದಾರೆ.