ಮಂಗಳೂರು: ಇಪ್ಪತ್ತೆರಡು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ತಾಯಿ ಇಂದು ಸಂಜೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ, ಮಗಳ ನಾಪತ್ತೆ ಪ್ರಕರಣದ ಬಗ್ಗೆ ದೂರು ನೀಡಿ, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ 2003ರಲ್ಲಿ ಧರ್ಮಸ್ಥಳದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದರು.
ಧರ್ಮಸ್ಥಳದಲ್ಲಿ ಒತ್ತಡದಿಂದ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೊಬ್ಬ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದ. ಪತ್ರ ಬರೆದ ಕೆಲವೇ ದಿನಗಳ ಬಳಿಕ ಅದೇ ವ್ಯಕ್ತಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನೂ ನೀಡಿದ್ದ ಬರುವಾಗ ತನ್ನ ಜೊತೆ ಅಸ್ತಿಪಂಜರವೊಂದನ್ನು ತಂದಿದ್ದು, ಅದನ್ನು ಪೊಲೀಸರು ವಿಧಿ ವಿಜ್ಞಾನ ತನಿಖೆಗೆ ಒಳಪಡಿಸಿದ್ದಾರೆ. ಧರ್ಮಸ್ಥಳದ ಸುತ್ತಮುತ್ತ ಬಹಳಷ್ಟು ಕಡೆಗಳಲ್ಲಿ ತಾನು ಶವಗಳನ್ನು ಹೂತು ಹಾಕಿರುವುದಾಗಿಯು, ಪೊಲೀಸರು ತನಿಖೆ ನಡೆಸುವುದಾದರೆ ಆ ಸ್ಥಳಗಳನ್ನು ತೋರಿಸುವುದಾಗಿ ಆ ವ್ಯಕ್ತಿ ತಿಳಿಸಿದ್ದ. ಈಗ ಆ ವ್ಯಕ್ತಿಯನ್ನು ಪ್ರತಿನಿಧಿಸುವ ಇಬ್ಬರು ನ್ಯಾಯವಾದಿಗಳು ಎಸ್ ಐ ಟಿ ರಚನೆ ಬಗ್ಗೆ ಬೇಡಿಕೆ ಮುಂದಿಟ್ಟಿದ್ದಾರೆ.ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆಗಳು ಹಾಗು ಅವುಗಳನ್ನು ಒತ್ತಡದಿಂದಾಗಿ ತಾನೇ ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿರುವುದು ಈಗ ರಾಜ್ಯ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಅದೇ ಹೊತ್ತಿಗೆ ಸುಜಾತಾ ಭಟ್ ಅವರು ತಮ್ಮಮಗಳೂ ಅಲ್ಲೇ ಕಾಣೆಯಾಗಿದ್ದಾಳೆ ಎಂದು ದೂರು ಸಲ್ಲಿಸಲು ಬಂದಿರುವುದು ಮತ್ತೊಮ್ಮೆ ಸಂಚಲನಕ್ಕೆ ದಾರಿ ಮಾಡಿಕೊಡುತ್ತಿದೆ.