ಮಂಗಳೂರು : ಮದುವೆ ಮಾಡಿಕೊಂಡು ಗಂಡನೇ ಹೆಂಡತಿಯನ್ನು ಬೇರೆಯವರ ಜೊತೆ ಬಲವಂತವಾಗಿ ಮಲಗಿಸಿ ಖಾಸಗಿ ವಿಡಿಯೋ ಮಾಡಿಟ್ಟುಕೊಂಡು ವೈರಲ್ ಮಾಡುವುದಾಗಿ ಬೆದರಿಸಿ, ಹಣಕ್ಕಾಗಿ ಕಂಡ, ಕಂಡವರ ಜೊತೆಗೆ ಮಲಗುವಂತೆ ಹೇಳುತ್ತಿದ್ದು,ಗಂಡನ ಕಿರುಕುಳಕ್ಕೆ ಬೇಸತ್ತು ರಕ್ಷಣೆ ಕೋರಿ ಪೊಲೀಸರಿಗೆ ದೂರು ಕೊಟ್ಟರೆ, ಸಹಾಯ ಮಾಡಲು ಬಂದ ಪೊಲೀಸ್ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.
ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಕೆಲವು ವರ್ಷಗಳು ಕಳೆದಿತ್ತು. ಗಂಡ ಬಲವಂತವಾಗಿ ಬೇರೆಯವರ ಹತ್ತಿರ ಕಳಿಸಿ ವಿಡಿಯೋ ಮಾಡಿಟ್ಟುಕೊಂಡು, ತನ್ನ ಬಳಿ ಹಣವಿಲ್ಲ ಎಂದಾಗ ತಾನು ಹೇಳಿದವರ ಜೊತೆ ಸಹಕರಿಸಬೇಕು. ನೀನು ಇನ್ನೊಬ್ಬರ ಜೊತೆಗೆ ಮಲಗದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ. ಇದರೊಂದಿಗೆ ಗಂಡನೇ ತನ್ನ ಹೆಂಡತಿಯನ್ನು ಹತ್ತಾರು ಜನರಿಗೆ ತಲೆಹಿಡಿಯುವ ಕೆಲಸ ಮಾಡಿದ್ದಾನೆ. ಇದರಿಂದ ನೊಂದ ಮಹಿಳೆ ಪರಿಚಯದ ಕಾವೂರು ಪೊಲೀಸ್ ಕಾನ್ಸ್‌ಟೇಬಲ್ ಚಂದ್ರ ನಾಯ್ಕ್ ನನ್ನು ಸಂಪರ್ಕ ಮಾಡಿದ್ದಾಳೆ.
ಈ ಚಂದ್ರನಾಯ್ಕ್ ನೆರವು ನೀಡಲು ಮುಂದಾಗಿದ್ದು, ಮಹಿಳೆಯ ಮನವಿಯಂತೆ ಆಕೆಯ ಗಂಡನ ಬಳಿಯಿದ್ದ ಖಾಸಗಿ ವಿಡಿಯೋವನ್ನು ಪೊಲೀಸ್ ಅಧಿಕಾರ ಬಳಸಿ ಡಿಲೀಟ್ ಮಾಡಿಸಿದ್ದಾನೆ. ನಂತರ ಸಂತ್ರಸ್ತ ಮಹಿಳೆ ಪತಿಯ ಸಹಕಾರದಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಲು ಮುಂದಾಗಿದ್ದಾನೆ. ತನಗೆ ಬೇಕೆನಿಸಿದಾಗಲೆಲ್ಲಾ ನೇರವಾಗಿ ಮಹಿಳೆಯ ಮನೆಗೆ ಹೋಗಿ ತನ್ನ ಲೈಂಗಿಕ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಇವನ ಕಾಟ ಸಹಿಸಿಕೊಳ್ಳಲಾಗದೇ ಸಂತ್ರಸ್ಥೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಂತ್ರಸ್ಥೆಯ ದೂರಿನ ಹಿನ್ನಲೆಯಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ಥ ಮಹಿಳೆಯ ಗಂಡ ಮತ್ತು ಕಾವೂರು ಠಾಣಾ ಪೊಲೀಸ್ ಕಾನ್ಸ್ಟೇಬಲ್ ಚಂದ್ರನಾಯ್ಕ್ ನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.