ಮಂಗಳೂರು: ನಗರದ ಪ್ರತಿಷ್ಠಿತ ನಾಲ್ಕು ವೈದ್ಯಕೀಯ ಕಾಲೇಜುಗಳಿಗೆ ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಎರ್ನಾಕುಲಂ ಮೂಲದ ಮಂಗಳೂರಿನ ದೇರಳಕಟ್ಟೆಯ ಅಪಾರ್ಟ್‌ಮೆಂಟ್ ನಿವಾಸಿ ಮೊಹಮ್ಮದ್ ಅರ್ಷದ್ ಖಾನ್(29) ಬಂಧಿತ ಆರೋಪಿಯಾಗಿದ್ದು, ಈತ ಬಿಡಿಎಸ್ ಡ್ರಾಪ್ ಔಟ್ ವಿದ್ಯಾರ್ಥಿ. ಈತ ಮಾದಕವಸ್ತು ಎಂಡಿಎಂಎ, ಹೈಡೋವಿಡ್ ಗಾಂಜಾ ಮತ್ತು ಎಂಡಿಎಂಎ ಪಿಲ್ಸ್ ಅನ್ನು ಬೆಂಗಳೂರಿನಿಂದ ಖರೀದಿಸಿ ಮಂಗಳೂರಿನ ನಾಲ್ಕು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ. ಈತ ದೇರಳಕಟ್ಟೆಯ ಕಾಲೇಜು ಪರಿಸರದಲ್ಲಿ ನಿಂತು ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಆಗಸ್ಟ್ 29ರಂದು ಬಂಧಿಸಿದ್ದಾರೆ. ಈತ ಎಂಬಿಬಿಎಸ್, ಫಿಸಿಯೋಥೆರಪಿ, ಸ್ನಾತಕೋತ್ತರ ಪದವಿ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಹೈಡೋವೀಡ್ ಗಾಂಜಾ ಮತ್ತು 0.45 ಗ್ರಾಂ ಎಂಡಿಎಂಎ ಪಿಲ್ಸ್ ಅನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಮಾದಕದ್ರವ್ಯದ ಮೌಲ್ಯ 10.85 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೆ ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್, ಸಹಿತ ಒಟ್ಟು 11,05,500ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.