image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಸ್‌ ನಿಲ್ದಾಣಗಳಲ್ಲಿ ಬ್ಯಾಗ್ ಕದಿಯುತ್ತಿದ್ದ ಅಂತರ್ ಜಿಲ್ಲಾ ಕಳ್ಳ ಅರೆಸ್ಟ್!

ಬಸ್‌ ನಿಲ್ದಾಣಗಳಲ್ಲಿ ಬ್ಯಾಗ್ ಕದಿಯುತ್ತಿದ್ದ ಅಂತರ್ ಜಿಲ್ಲಾ ಕಳ್ಳ ಅರೆಸ್ಟ್!

ಮಂಗಳೂರು: ಬಸ್ ನಿಲ್ದಾಣಗಳಲ್ಲಿ ಬ್ಯಾಗ್ ಕಳವುಗೈಯುತ್ತಿದ್ದ ಅಂತ‌ರ್ ಜಿಲ್ಲಾ ಕಳ್ಳನನ್ನು ಮಂಗಳೂರು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತನಿಂದ ಒಟ್ಟು 6,47,920ರೂ. ಬೆಲೆಬಾಳುವ 46.28 ಗ್ರಾಂ ತೂಕದ ಚಿನ್ನದ ಒಡವೆ ಹಾಗೂ 5000ರೂ ನಗದು ವಶಪಡಿಸಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತ್ಯಾಗರಾಜ್ ಕಾಲನಿ ನಿವಾಸಿ ಮಹಮ್ಮದ್ ಇಮ್ರಾನ್ ಎನ್.ಎಮ್. (44) ಬಂಧಿತ ಆರೋಪಿ.

ಬಿಜೈ ಕೆ.ಎಸ್.ಆ‌ರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಜ.23ರಂದು ಸಂಜೆ 7ಗಂಟೆ ಸುಮಾರಿಗೆ ವೃದ್ಧ ಮಹಿಳೆಯರಿಬ್ಬರು ಮತ್ತು ಹಿರಿಯ ನಾಗರಿಕರೊಬ್ಬರು ಬೆಂಗಳೂರಿಗೆ ಹೋಗುವವರಿದ್ದು ಇವರ ಬ್ಯಾಗ್‌ನಲ್ಲಿ ಸುಮಾರು 45 ಗ್ರಾಂ ಚಿನ್ನಾಭರಣ ಹಾಗೂ 20,000ರೂ ಹಣವಿತ್ತು. ಈ ಬ್ಯಾಗ್‌ ಅನ್ನು ಕಳ್ಳರು ಎಗರಿಸಿದ್ದರು. ಈ ಬಗ್ಗೆ ನೀಡಿರುವ ದೂರಿನಂತೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಪತ್ತೆಗೆ ಕುರಿತು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಅಂತರ್‌ ಜಿಲ್ಲೆ ಕಳ್ಳ ಮಹಮ್ಮದ್ ಇಮ್ರಾನ್‌ನನ್ನು ಜ.28ರಂದು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ಬಳಿ ದಸ್ತಗಿರಿ ಮಾಡಿದೆ. ಆರೋಪಿತನಿಂದ ಒಟ್ಟು 6,47,920ರೂ. ಬೆಲೆಬಾಳುವ 46.28 ಗ್ರಾಂ ತೂಕದ ಚಿನ್ನದ ಒಡವೆ ಹಾಗೂ 5000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಯು ಬಸ್ಸು ನಿಲ್ದಾಣಗಳಲ್ಲಿ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್‌ಗಳನ್ನು ಕಳ್ಳತನ ಮಾಡುವುದನ್ನು ರೂಢಿ ಮಾಡಿಕೊಂಡಿದ್ದ. ಈತನ ಮೇಲೆ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೇ ಈತನು ಹಾಸನ ಜಿಲ್ಲೆಯ ಮನೆಕಳವು ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಆರೋಪಿತನ ವಿರುದ್ಧ ವಾರೆಂಟ್ ಹೊರಡಿಸಿದೆ.

Category
ಕರಾವಳಿ ತರಂಗಿಣಿ