ಕೇರಳ : ಉತ್ತರ ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್ ಆತಂಕ ಹೆಚ್ಚಾಗುತ್ತಿದೆ. ಸೋಂಕಿತರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಸಾಧ್ಯವಾಗುವ ಎಲ್ಲಾ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಕಳೆದ ವಾರ ಮಲ್ಲಪುರಂನ ಸೋಂಕಿತ ಮಹಿಳೆಯೊಬ್ಬರು ನಿಫಾ ವೈರಸ್ ನಿಂದ ಸಾವನ್ನಪ್ಪಿದ್ದರು. ಥಚನಟ್ಟುಕರ ಮೂಲದ ಮತ್ತೊಬ್ಬ ಸೋಂಕಿತ ಮಹಿಳೆ ನೆರೆಯ ಕೋಝಿಕೋಡ್ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಷ್ಟಾಚಾರದ ಅನುಸಾರ, ಮಹಿಳೆಗೆ ಮೊನೊಕ್ಲೋನಲ್ ಆ್ಯಂಟಿಬಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಎರಡನೇ ಡೋಸ್ ಚಿಕಿತ್ಸೆಯ ಕಣ್ಗಾವಲಿನಲ್ಲಿದ್ದಾರೆ. ಪಾಲಕ್ಕಾಡ್ನಲ್ಲಿ ಸೋಂಕಿತ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, "ಪಾಲಕ್ಕಾಡ್ನ ಮೊದಲ ಪ್ರಕರಣ ಇದು. ರೋಗಿಯ ಪರಿಸ್ಥಿತಿ ಗಂಭೀರವಾಗಿದೆ. ಆದರೆ, ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು ನೀಡಲಾಗುತ್ತಿದೆ" ಎಂದರು.
173 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 101 ಪ್ರಾಥಮಿಕ ಮತ್ತು 73 ಮಧ್ಯಮ ಹಂತದ ಪ್ರಕರಣಗಳಾಗಿವೆ. 52 ಪ್ರಕರಣಗಳು ಹೆಚ್ಚಿನ ಅಪಾಯ ಹೊಂದಿದ್ದು, 48 ಪ್ರಕರಣಗಳು ಕಡಿಮೆ ತೀವ್ರತೆ ಹೊಂದಿದೆ ಎಂದು ಸಚಿವೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪತ್ತೆಯಾಗಿರುವ ಐದು ಮಾದರಿಗಳಲ್ಲಿ ನೆಗೆಟಿವ್ ಬಂದಿದ್ದು, ಇನ್ನು ನಾಲ್ಕು ಮಾದರಿಗಳನ್ನು ಪರೀಕ್ಷೆಗೆ ಮಂಜೆರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಸಚಿವರು ಕೂಡ ಈ ವಲಯದಲ್ಲಿ ಸುಳ್ಳು ಸುದ್ದಿ ಹರಡದಂತೆ ಸೂಚಿಸಿದ್ದು, ಒಂದು ವೇಳೆ ಈ ರೀತಿ ಪ್ರಕರಣ ಪತ್ತೆಯಾದರೆ, ಕ್ರಮ ನಡೆಸುವ ಕುರಿತು ಎಚ್ಚರಿಸಿದ್ದಾರೆ. ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಮುಖ್ಯಸ್ಥರು, ಹಿರಿಯ ಆರೋಗ್ಯ ಅಧಿಕಾರಿಗಳು ಸೇರಿದ್ದಾರೆ.