image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಆಪರೇಷನ್ ಸಿಂಧೂರದ ವೇಳೆ ಅಣ್ವಸ್ತ್ರ ಪ್ರಯೋಗಿಸುವ ಯಾವುದೇ ಯೋಚನೆ ಇರಲಿಲ್ಲ : ಶಹಬಾಜ್​ ಶರೀಫ್

ಆಪರೇಷನ್ ಸಿಂಧೂರದ ವೇಳೆ ಅಣ್ವಸ್ತ್ರ ಪ್ರಯೋಗಿಸುವ ಯಾವುದೇ ಯೋಚನೆ ಇರಲಿಲ್ಲ : ಶಹಬಾಜ್​ ಶರೀಫ್

ಪಾಕಿಸ್ತಾನ : ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿತ್ತು. ಈ ವೇಳೆ ಪಾಕಿಸ್ತಾನವು ಭಾರತದ ಮೇಲೆ ಅಣ್ವಸ್ತ್ರ ಬಳಸುವ ಬೆದರಿಕೆ ಹಾಕಿತ್ತು. ಆದರೆ, ಇದೀಗ 'ಅಂತಹ ಯಾವುದೇ ಯೋಚನೆ ಇರಲಿಲ್ಲ' ಎಂದು ಪ್ರಧಾನಿ ಶಹಬಾಜ್​ ಶರೀಫ್​ ಹೇಳಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಪಾಕ್​ ಪ್ರಧಾನಿ, "ನಮ್ಮ ದೇಶದ ಪರಮಾಣು ಕಾರ್ಯಕ್ರಮ ಇರುವುದು ಶಾಂತಿಯುತ ಚಟುವಟಿಕೆಗಳು ಮತ್ತು ಸ್ವಯಂ ರಕ್ಷಣೆಗಾಗಿ ಮಾತ್ರವೇ ಹೊರತು, ಯಾವುದೇ ದೇಶದ ವಿರುದ್ಧ ಆಕ್ರಮಣ ನಡೆಸಲು ಅಲ್ಲ" ಎಂದರು. ಈ ಮೂಲಕ, ಭಾರತದೊಂದಿಗಿನ ಇತ್ತೀಚೆಗಿನ ಸಂಘರ್ಷದ ಸಮಯದಲ್ಲಿ ಪರಮಾಣು ದಾಳಿ ಮಾಡುವ ಬೆದರಿಕೆಯನ್ನು ಅವರು ನಿರಾಕರಿಸಿದರು.

ಭಾರತದ ಜೊತೆಗೆ ನಾಲ್ಕು ದಿನ ನಡೆದ ಸೇನಾ ಸಂಘರ್ಷದ ಕುರಿತು ಮಾತನಾಡಿರುವ ಶರೀಫ್, "ಭಾರತೀಯ ಸೇನಾ ದಾಳಿಯಲ್ಲಿ 55 ಪಾಕಿಸ್ತಾನಿಗಳು ಸಾವನ್ನಪ್ಪಿದ್ದಾರೆ. ಪಾಕಿಸ್ತಾನವೂ ತನ್ನ ಪೂರ್ಣ ಶಕ್ತಿಯಿಂದ ಆಕ್ರಮಣ ಎದುರಿಸಿದೆ" ಎಂದು ಅವರು ಹೇಳಿದರು. ಎಪ್ರಿಲ್​ 22ರಂದು ಪಾಕಿಸ್ತಾನದ ಉಗ್ರರ ಗುಂಪೊಂದು ಜಮ್ಮು ಕಾಶ್ಮೀರದ ಪಹಲ್ಗಾಮ್​​ನಲ್ಲಿ ವಿಧ್ವಂಸಕ ಕೃತ್ಯ ಎಸಗಿ 26 ಪ್ರವಾಸಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು. ಈ ವೇಳೆ ಹಲವರು ಗಾಯಗೊಂಡಿದ್ದರು. ಮೃತರಲ್ಲಿ ಯುಎಇ ಮತ್ತು ನೇಪಾಳದ ಪ್ರವಾಸಿಗರೂ ಇದ್ದರು. ಉಗ್ರರ ದಾಳಿಯ ವಿರುದ್ಧ ದೇಶಾದ್ಯಂತ ಆಕ್ರೋಶ ಮತ್ತು ಪ್ರತೀಕಾರದ ಕೂಗೆದ್ದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಮೇ 7ರಿಂದ 10 ನಡುವೆ ನಾಲ್ಕು ದಿನಗಳ ಕಾಲ ತೀವ್ರ ದಾಳಿ ನಡೆಸಿತ್ತು. ಇದರಲ್ಲಿ ಪಾಕಿಸ್ತಾನದಲ್ಲಿದ್ದ ಉಗ್ರ ನೆಲೆಗಳನ್ನು ಧ್ವಂಸ ಮಾಡಿತ್ತು. ಜೊತೆಗೆ, ಮೂರು ಸೇನಾ ನೆಲೆಗಳ ಮೇಲೂ ದಾಳಿ ಮಾಡಿ ತೀವ್ರ ಹಾನಿ ಮಾಡಿತ್ತು.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆ ಆಕ್ರಮಣ ನಡೆಸಿತ್ತು. ಜಮ್ಮು ಕಾಶ್ಮೀರದ ಗಡಿಯಲ್ಲಿ ಹಾರಿಬಂದ ನೂರಾರು ಕ್ಷಿಪಣಿಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಆಗಸದಲ್ಲೇ ನಾಶ ಮಾಡಿತ್ತು. ಭಾರತದ ದಾಳಿಗೆ ತತ್ತರಿಸಿದ ಪಾಕಿಸ್ತಾನ ಮೇ 10ರಂದು ಶರಣಾಗತಿ ಕೋರಿತು. ಬಳಿಕ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ಮಾತುಕತೆ ನಡೆದು ಕದನ ವಿರಾಮ ಘೋಷಿಸಲಾಯಿತು. ಭಾರತವು ತಮ್ಮ ದೇಶದ ಮೇಲೆ ದಾಳಿ ಮಾಡಿದ್ದಲ್ಲಿ ಅಣ್ವಸ್ತ್ರ ಬಳಸುವ ಬೆದರಿಕೆಯನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ, ಸರ್ಕಾರದ ಸಚಿವರು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ತಿರುಗೇಟು ನೀಡಿ, ತಮ್ಮ ಬಳಿಯೂ ಅಣ್ವಸ್ತ್ರಗಳಿವೆ ಎಂದಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡ ಹಲವು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ಅಣ್ವಸ್ತ್ರ ಬಳಸುವ ಸಾಧ್ಯತೆ ಇತ್ತು. ಅದನ್ನು ನಾನೇ ಮಧ್ಯಸ್ಥಿಕೆ ವಹಿಸಿ ತಡೆದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ