image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಿದೇಶಾಂಗ ಸಚಿವ ಜೈಶಂಕರ್​ ಚೀನಾ ಪ್ರವಾಸ ವೇಳೆ, ಅಧ್ಯಕ್ಷ ಜಿನ್​ಪಿಂಗ್​ ಭೇಟಿ

ವಿದೇಶಾಂಗ ಸಚಿವ ಜೈಶಂಕರ್​ ಚೀನಾ ಪ್ರವಾಸ ವೇಳೆ, ಅಧ್ಯಕ್ಷ ಜಿನ್​ಪಿಂಗ್​ ಭೇಟಿ

ಚೀನಾ : ಚೀನಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಡಾ.ಎಸ್​. ಜೈಶಂಕರ್​ ಅವರು ಡ್ರ್ಯಾಗನ್​ ರಾಷ್ಟ್ರದ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. 2020 ರಲ್ಲಿ ಸಂಭವಿಸಿದ್ದ ಗಲ್ವಾನ್​ ಸಂಘರ್ಷದ ಬಳಿಕದ ಮೊದಲ ಭೇಟಿ ಇದಾಗಿದೆ. ಶಾಂಘೈ ಸಹಕಾರ ಒಕ್ಕೂಟದ (ಎಸ್​​ಸಿಒ) ವಿದೇಶಾಂಗ ಸಚಿವರ ಸಭೆ ಹಿನ್ನೆಲೆ ಜೈಶಂಕರ್​ ಅವರು ಎರಡು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಈ ಸಭೆಗೂ ಮೊದಲು ಕ್ಸಿ ಜಿನ್​​ಪಿಂಗ್​ ಅವರನ್ನು ಭಾರತದ ವಿದೇಶಾಂಗ ಸಚಿವರು ನೇರಾನೇರ ಭೇಟಿಯಾಗಿ ಹಸ್ತಲಾಘವ ಮಾಡಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಚೀನಾದ ಅಧ್ಯಕ್ಷರ ಜೊತೆ ಸಭೆ ನಡೆಸಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಯ ಬಗ್ಗೆ ನಾಯಕರು ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ಚೀನಾದ ಅಧ್ಯಕ್ಷರಿಗೆ ಜೈಶಂಕರ್​ ತಿಳಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ಬಗ್ಗೆ ಉಭಯ ನಾಯಕರು ಉತ್ಸುಕತೆ ತೋರಿಸಿದ್ದಾರೆ.

ಎಸ್​​ಸಿಒ ವಿದೇಶಾಂಗ ಸಚಿವರ ಸಭೆಗೂ ಮೊದಲು ಕ್ಸಿ ಜಿನ್​​ಪಿಂಗ್​ ಅವರನ್ನು ಭೇಟಿಯಾದ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಜೈಶಂಕರ್​ ಮಾಹಿತಿ ಹಂಚಿಕೊಂಡಿದ್ದಾರೆ. "ಇಂದು (ಜುಲೈ 15) ಬೆಳಗ್ಗೆ ಬೀಜಿಂಗ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ಅವರಿಗೆ ತಿಳಿಸಿದೆ. ಎರಡೂ ರಾಷ್ಟ್ರಗಳ ನಡುವಿನ ಬೆಳವಣಿಗೆಯ ಬಗ್ಗೆ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ. 2020 ರ ಜೂನ್​​ನಲ್ಲಿ ಗಲ್ವಾನ್​ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಸಂಘರ್ಷ ನಡೆದಿತ್ತು. ಇದು ಎರಡೂ ರಾಷ್ಟ್ರಗಳ ನಡುವೆ ದೊಡ್ಡ ಕಂದಕ ಸೃಷ್ಟಿಸಿತ್ತು. ಒಂದು ಹಂತದಲ್ಲಿ ಇದು ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಗಡಿ ಭಾಗದಲ್ಲಿ ಎರಡೂ ಸೇನೆಗಳು ಸನ್ನದ್ಧ ರೀತಿಯಲ್ಲಿ ಠಿಕಾಣಿ ಹೂಡಿದ್ದರು. ಗಡಿಯಲ್ಲಿ ಬಿಕ್ಕಟ್ಟು ಉಂಟಾಗಿದ್ದರ ಬಗ್ಗೆ ಉಭಯ ಸೇನೆಗಳ ಮುಖ್ಯಸ್ಥರು ಸರಣಿ ಮಾತುಕತೆ ನಡೆಸಿ ಸಂಧಾನ ನಡೆಸಿ ಸಂಘರ್ಷ ಅಂತ್ಯಗೊಳಿಸಿದ್ದರು.

Category
ಕರಾವಳಿ ತರಂಗಿಣಿ