image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಓಡಿಶಾ ರಾಜ್ಯ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಓಡಿಶಾ ರಾಜ್ಯ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಭುವನೇಶ್ವರ್​: ಪ್ರಾಧ್ಯಾಪಕರ ಲೈಂಗಿಕ ಕಿರುಕುಳದ ವಿರುದ್ಧ ಕಾಲೇಜು ಕ್ರಮ ಕೈಗೊಳ್ಳದೆ ನೊಂದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದ ಬಾಲಸೋರ್​​ ಮೂಲ​ದ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕರೆ ನೀಡಿದ್ದ ಓಡಿಶಾ ರಾಜ್ಯ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಪಿಐ, ಸಿಪಿಐ-ಎಂ, ಎಸ್‌ಯುಸಿಐ, ಎಐಡಿಎಸ್‌ಒ ಮತ್ತು ಎಐವೈಎಫ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಒಡಿಶಾ ಬಂದ್​​ಗೆ ಕರೆ ನೀಡಲಾಗಿತ್ತು. ಬಂದ್​ ಹಿನ್ನೆಲೆ ರಾಜ್ಯದೆಲ್ಲೆಡೆ ಬಿಗಿ ಬಂದೋಬಸ್ತ್​ ನಡೆಸಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮದ ಮುನ್ನೆಚ್ಚರಿಕೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

ಬಾಲಸೋರ್‌ನ ಕಾಲೇಜೊಂದರ ಎರಡನೇ ವರ್ಷದ ಇಂಟಿಗ್ರೇಟೆಡ್ ಬಿ.ಎಡ್ ವಿದ್ಯಾರ್ಥಿನಿ ಪ್ರಾಧ್ಯಾಪಕರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಈ ದೂರಿನ ವಿರುದ್ಧ ಕ್ರಮಕ್ಕೆ ಮುಂದಾಗದ ಪ್ರಾಂಶುಪಾಲರು ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಇದರಿಂದ ನೊಂದ ವಿದ್ಯಾರ್ಥಿನಿ ಪ್ರಾಂಶುಪಾಲರ ಕೋಣೆ ಎದುರೇ ಬೆಂಕಿ ಹಚ್ಚಿಕೊಂಡಿದ್ದರು. ಶೇ 95ರಷ್ಟು ಸುಟ್ಟುಗಾಯದಿಂದ ಬಳಲಿದ ವಿದ್ಯಾರ್ಥಿನಿ ಸೋಮವಾರ ಭುವನೇಶ್ವರದ ಏಮ್ಸ್​​ನಲ್ಲಿ ಸಾವನ್ನಪ್ಪಿದ್ದರು. ಈ ಘಟನೆಗೆ ರಾಷ್ಟ್ರದಾದ್ಯಂತ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿತ್ತು. ಬಂದ್​ ಹಿನ್ನೆಲೆ ಬಹುತೇಕ ಜಿಲ್ಲೆಗಳಲ್ಲಿ ಅಂಗಡಿ- ಮುಂಗಟ್ಟು, ಮಾರುಕಟ್ಟೆ, ಶಾಲಾ ಮತ್ತು ಕಾಲೇಜುಗಳು ಬಂದ್​ ಆಗಿದ್ದು, ತುರ್ತು ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ರಸ್ತೆಗಳನ್ನು ಬಂದ್​ ಮಾಡಲಾಗಿದ್ದು, ಅನೇಕ ಕಡೆ ರೈಲ್ವೆ ಮತ್ತು ಬಸ್​ ಸೇವೆಗಳಿಗೆ ತಡೆಯಾಗಿದ್ದು, ಪ್ರಯಾಣಿಕರು ಪರದಾಡುವಂತೆ ಆಗಿದೆ.

ಲೋಕಸೇವಾ ಭವನದ ಸುತ್ತಲೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸಚಿವರು ಮತ್ತು ಕಾರ್ಯದರ್ಶಿಗಳಿಗೆ ಪೈಲಟ್ ವಾಹನಗಳ ಮೂಲಕ ಬೆಂಗಾವಲು ನೀಡಲಾಗಿದೆ. ಪ್ರಮುಖ ನಗರ ಮತ್ತು ಆಯಾಕಟ್ಟಿನ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಸದ್ಯ ರಾಜ್ಯದಲ್ಲಿ ಬಂದ್​ ಶಾಂತಿಯುತವಾಗಿದ್ದು, ಸಾರ್ವಜನಿಕರಿಗೂ ಕೂಡ ಸಹಾಕರ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಬಂದ್​ ಹಿನ್ನೆಲೆ ಮಾತನಾಡಿರುವ ಒಡಿಶಾ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಭಕ್ತ ಚರಣ್​, ಇದು ರಾಜಕೀಯವಲ್ಲ. ಇದು ನಮ್ಮ ಮಗಳ ಪರವಾಗಿ ನಿಲ್ಲುವುದಾಗಿದೆ. ನಾವು ಇದೀಗ ಕ್ರಮಕ್ಕೆ ಮುಂದಾಗದೇ ಹೋದಾಗ ಪ್ರತಿ ಶಾಲೆ, ಕಾಲೇಜು​, ವಿಶ್ವವಿದ್ಯಾಲಯವೂ ಅಪಾಯದಲ್ಲಿರಲಿದೆ. ಸುರಕ್ಷತೆ ನಡೆಸುವಲ್ಲಿ ವಿಫಲವಾದ ಆರೋಪದ ಹೊಣೆ ಹೊತ್ತು ರಾಜ್ಯದ ಶಿಕ್ಷಣ ಸಚಿವರು, ಸ್ಥಳೀಯ ಶಾಸಕರು ಮತ್ತು ಸಂಸದರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Category
ಕರಾವಳಿ ತರಂಗಿಣಿ