ನವದೆಹಲಿ: ಅಹಮದಾಬಾದ್ನಲ್ಲಿ ಏರ್ ಇಂಡಿಯಾ 787-8 'ಡ್ರಿಮ್ಲೈನರ್' ಪತನಗೊಂಡ ನಂತರ ಉದ್ಭವಿಸಿರುವ ಹತ್ತಾರು ಪ್ರಶ್ನೆಗಳು, ಇದೇ ಸೋಮವಾರದಿಂದ (ಜುಲೈ 21) ಆರಂಭವಾಗಲಿರುವ ಸಂಸತ್ನ ಮುಂಗಾರು ಅಧಿವೇಶನದಲ್ಲಿ ಮತ್ತೆ ಪ್ರತಿಧ್ವನಿಸುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ. 'ಡ್ರಿಮ್ಲೈನರ್' ವಿಮಾನ ಅಪಘಾತಕ್ಕೀಡಾಗಿರುವುದಕ್ಕೆ ವಿಧ್ವಂಸಕ ಕೃತ್ಯದ ಆಯಾಮವಿದೆಯೇ? ವಿಮಾನದ ಬ್ಲ್ಯಾಕ್ಬಾಕ್ಸ್ಅನ್ನು ಪರಿಶೀಲನೆಗಾಗಿ ಒಂದು ವೇಳೆ ವಿದೇಶಕ್ಕೆ ಕಳುಹಿಸಿದಲ್ಲಿ, ಅದರಲ್ಲಿನ ದತ್ತಾಂಶಕ್ಕೆ ಸಂಬಂಧಿಸಿ ಬೋಯಿಂಗ್ ಸಂಸ್ಥೆ ದುರುದ್ದೇಶದಿಂದ ಏನಾದರೂ ಮಾಡಬಹುದೇ? ವಿಮಾನಯಾನ ನಿಯಂತ್ರಿಸುವ ಸಂಸ್ಥೆಯ ವೈಫಲ್ಯಗಳು ಹಾಗೂ ಸುರಕ್ಷತೆಯ ಗುಣಮಟ್ಟ ಕುರಿತು ತನಿಖೆ ನಡೆಸುವುದಕ್ಕಾಗಿ ಜಂಟಿ ಸಂಸದೀಯ ಸಮಿತಿಯೊಂದನ್ನು ರಚಿಸಲಾಗುತ್ತದೆಯೇ' ಎಂಬಂತಹ ಪ್ರಶ್ನೆಗಳನ್ನು ಮಂಡಿಸಲು ವಿವಿಧ ಪಕ್ಷಗಳು ಮುಂದಾಗಿವೆ.
ಕಾಂಗ್ರೆಸ್, ಬಿಜೆಪಿ, ಟಿಎಂಸಿ, ಡಿಎಂಕೆ, ಜೆಡಿಯು, ಸಿಪಿಎಂ, ಸಿಪಿಐ, ಶಿವಸೇನಾ, ಜನಸೇನಾ ಹಾಗೂ ಎನ್ಸಿಪಿ(ಎಸ್ಪಿ) ಪಕ್ಷಗಳಿಗೆ ಸೇರಿದ 50 ಸಂಸದರು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಶೂನ್ಯ ವೇಳೆ ವಿವಿಧ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲು ಸಜ್ಜಾಗಿದ್ದಾರೆ. ಈ ಪೈಕಿ, ಏರ್ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ 23 ಪ್ರಶ್ನೆಗಳು ಹಾಗೂ ರಾಜ್ಯಸಭೆಯಲ್ಲಿ 11 ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆಗೆ ಸಂಬಂಧಿಸಿ ಕನಿಷ್ಠ 7 ಪ್ರಶ್ನೆಗಳಿವೆ. ಆದರೆ, ಜೂನ್ 12ರಂದು ಅಹಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನ ಕುರಿತು ಈ ಪ್ರಶ್ನೆಗಳಲ್ಲಿ ನೇರ ಪ್ರಸ್ತಾಪ ಇಲ್ಲ. ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಪ್ರತಿ ಸೋಮವಾರ ರಾಜ್ಯಸಭೆಯಲ್ಲಿ ಹಾಗೂ ಗುರುವಾರಗಳಂದು ಲೋಕಸಭೆಯಲ್ಲಿ ತೆಗೆದುಕೊಳ್ಳುವುದನ್ನು ನಿಗದಿ ಮಾಡಲಾಗಿದೆ. ಹೀಗಾಗಿ, ಅಧಿವೇಶನದ ಮೊದಲ ದಿನವಾದ ಜುಲೈ 21ರಂದು ಸಂಸದರು ರಾಜ್ಯಸಭೆಯಲ್ಲಿ, ಏರ್ ಇಂಡಿಯಾ ವಿಮಾನ ಪತನ ಕುರಿತ ಪ್ರಶ್ನೆಗಳನ್ನು ಮುಂದಿಡುವ ಸಾಧ್ಯತೆಯೇ ಹೆಚ್ಚು.