ನವದೆಹಲಿ: ಭಾರತವು ಎಂದಿಗೂ ತನ್ನ ಕೃಷಿಕರು, ಮೀನುಗಾರರು, ಹೈನು ಕೃಷಿಕರ ಹಿತಾಸಕ್ತಿಯಲ್ಲಿ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಈ ಕುರಿತು ಖಚಿತಪಡಿಸಲು ಯಾವುದೇ ಬೆಲೆ ತೆರಲು ಸಿದ್ದವಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಭಾರತದ ಆಮದು ವಸ್ತುಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ವಿಧಿಸುವ ಕುರಿತು ಘೋಷಣೆ ಹೊರಬಿದ್ದ ಬೆನ್ನಲ್ಲೇ ಪ್ರಧಾನಿಯಿಂದ ಈ ಹೇಳಿಕೆ ಬಂದಿದೆ. ಅಮೆರಿಕದ ಈ ಸುಂಕದಲ್ಲಿ ಕೃಷಿ ಉತ್ಪನ್ನಗಳ ಮೇಲಿನ ಸುಂಕ ಕೂಡ ಒಳಗೊಂಡಿದೆ. ಭಾರತ ರತ್ನ ಎಂಎಸ್ ಸ್ವಾಮಿನಾಥನ್ ಶತಮಾನೋತ್ಸವ ಜಾಗತಿಕ ಸಮ್ಮೇಳದಲ್ಲಿ ಮಾತನಾಡಿದ ಅವರು, ನಮಗೆ ನಮ್ಮ ರೈತರ ಹಿತಾಸಕ್ತಿ ಪ್ರಮುಖ ಆದ್ಯತೆಯಾಗಿದ್ದು, ಭಾರತ ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನನಗೆ ಗೊತ್ತಿದೆ ನಾವು ಹೆಚ್ಚಿನ ಸುಂಕ ಪಾವತಿ ಮಾಡಬೇಕು ಎಂದು. ಅದಕ್ಕೆ ಭಾರತ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷರಿಗೆ ಖಡಕ್ ಸಂದೇಶ ರವಾನಿಸಿದರು.
ಕೃಷಿ ಕ್ರಾಂತಿಕಾರಿ ಪ್ರೊ ಎಂಎಸ್ ಸ್ವಾಮಿನಾಥನ್ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆ ಮೂರು ದಿನದ ಜಾಗತಿಕ ಸಮ್ಮೇಳನ ನಡೆಯುತ್ತಿದ್ದು, ಈ ವೇಳೆ ಅವರ ಸ್ಮರಣಾರ್ಥವಾಗಿ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಸ್ವಾಮಿನಾಥನ್ ಅವರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಪ್ರಧಾನಿ, ಕೆಲವು ವ್ಯಕ್ತಿಗಳ ಕೊಡುಗೆ ಒಂದು ಕಾಲಕ್ಕೆ ಅಥವಾ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅಂತಹ ದೊಡ್ಡ ವಿಜ್ಞಾನಿಗಳು ಮತ್ತು ಭಾರತದ ನಿಜವಾದ ಮಗ ಪ್ರೊ ಎಂಎಸ್ ಸ್ವಾಮಿನಾಥನ್ ಎಂದು ಪ್ರಧಾನಿ ಬಣ್ಣಿಸಿದರು. ವಿಜ್ಞಾನವನ್ನು ಸಾರ್ವಜನಿಕ ಸೇವೆಯ ಮಾಧ್ಯಮವಾಗಿಸಿದರು. ದೇಶದ ಆಹಾರ ಭದ್ರತೆಯನ್ನು ತಮ್ಮ ಜೀವನದ ಮಿಷನ್ ಆಗಿ ಮಾಡಿಕೊಂಡರು. ಮುಂದಿನ ಹಲವು ಶತಮಾನದವರೆಗೆ ಭಾರತದ ನೀತಿಗಳು ಮತ್ತು ಆದ್ಯತೆಗಳಿಗೆ ಮಾರ್ಗದರ್ಶನವನ್ನು ನೀಡಿದರು. ಕಳೆದ 10 ವರ್ಷಗಳಲ್ಲಿ ಕೈಮಗ್ಗ ವಲಯವು ಹೆಚ್ಚಿನ ಮನ್ನಣೆ ಪಡೆದಿದ್ದು, ದೇಶಾದ್ಯಂತ ಬಲಗೊಂಡಿದೆ ಎಂದು ಪ್ರಧಾನಿ ತಿಳಿಸಿದರು.
ತಮ್ಮ ಹಾಗೂ ಸ್ವಾಮಿನಾಥನ್ ನಡುವಿನ ಒಡನಾಟ ಮೆಲುಕು ಹಾಕಿದ ಪ್ರಧಾನಿ, ಗುಜರಾತ್ನಲ್ಲಿ ಬರ, ಸೈಕ್ಲೋನ್ನಿಂದಾಗಿ ಕೃಷಿಯು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಿತ್ತು. ಕಛ್ನಲ್ಲಿ ಮರುಭೂಮಿ ವಿಸ್ತರಣೆ ಕಂಡಿತು. ನಾನು ಗುಜರಾತ್ ಸಿಎಂ ಆಗಿದ್ದ ಸಂದರ್ಭದಲ್ಲಿ ಪ್ರೊ ಸ್ವಾಮಿನಾಥತ್ ಜೊತೆಗೆ ಮಣ್ಣಿನ ಆರೋಗ್ಯದ ಕಾರ್ಡ್ಗೆ ಕೆಲಸ ಮಾಡಿದ್ದು, ಈ ಬಗ್ಗೆ ಅವರು ಅತೀವ ಆಸಕ್ತಿ ತೋರಿಸಿದ್ದರು. ಅವರು ಮುಕ್ತವಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದರು. ಅವರ ಕೊಡುಗೆಯ ಫಲವಾಗಿ ಈ ಉಪಕ್ರಮವು ಸಾಕಷ್ಟು ಯಶಸ್ಸು ಕಂಡಿತು ಎಂದರು.