ಅಮೆರಿಕ: ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ, ಭಾರತವು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಸ್ನೇಹ ಬೆಳೆಸುತ್ತಿರುವ ಬಗ್ಗೆ ಟೀಕೆ ಮಾಡಿದ್ದಾರೆ. ನವದೆಹಲಿಯು ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಿ, ಅದನ್ನು ಸಂಸ್ಕರಿಸಿ, ಜಾಗತಿಕವಾಗಿ ಉತ್ಪನ್ನಗಳನ್ನು ಪ್ರೀಮಿಯಂನಲ್ಲಿ ಮಾರಾಟ ಮಾಡುವ ಮೂಲಕ "ಕ್ರೆಮ್ಲಿನ್ಗೆ ಲಾಂಡ್ರೋಮ್ಯಾಟ್" ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಸ್ತುತ ಭಾರತದ ರಷ್ಯಾದಿಂದ ಕಚ್ಚಾತೈಲ ಖರೀದಿ ನೀತಿಯು ರಷ್ಯಾ ಉಕ್ರೇನ್ನಲ್ಲಿ ತನ್ನ ಯುದ್ಧ ಪ್ರಯತ್ನಗಳಿಗೆ ಹಣಕಾಸು ಒದಗಿಸಲು ಅನುವು ಮಾಡಿಕೊಡುತ್ತದೆ. ಮತ್ತು ಭಾರತವು ವಹಿವಾಟುಗಳಿಂದ ಲಾಭ ಪಡೆಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಕ್ತಪಾತದಲ್ಲಿ ತನ್ನ ಪಾತ್ರವನ್ನು ಭಾರತ ಗುರುತಿಸಲು ಬಯಸುವುದಿಲ್ಲ. ಆದರೂ ಕ್ಸಿ ಜಿನ್ಪಿಂಗ್ ಅವರನ್ನು ಬೆಂಬಲಿಸುತ್ತಿದೆ. ಅವರಿಗೆ ರಷ್ಯಾದ ತೈಲದ ಅಗತ್ಯವಿಲ್ಲ. ಇದು ಲಾಭ ಗಳಿಸುವ ಯೋಜನೆ. ಇದು ಕ್ರೆಮ್ಲಿನ್ಗೆ ಲಾಂಡ್ರೋಮೆಟ್. ನಾನು ಭಾರತವನ್ನು ಪ್ರೀತಿಸುತ್ತೇನೆ. ಮೋದಿ ಒಬ್ಬ ಮಹಾನ್ ನಾಯಕ, ಆದರೆ ದಯವಿಟ್ಟು ಭಾರತ, ಜಾಗತಿಕ ಆರ್ಥಿಕತೆಯಲ್ಲಿ ನಿಮ್ಮ ಪಾತ್ರದ ಬಗ್ಗೆ ಗಮನ ಹರಿಸಿ. ನೀವು ಈಗ ಮಾಡುತ್ತಿರುವುದು ಶಾಂತಿಯನ್ನು ಸೃಷ್ಟಿಸುತ್ತಿಲ್ಲ. ಅದು ಯುದ್ಧವನ್ನು ಶಾಶ್ವತಗೊಳಿಸುತ್ತಿದೆ ಎಂದು ಶ್ವೇತಭವನದ ವ್ಯಾಪಾರ ಸಲಹೆಗಾರ ನವರೋ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ .
ವಿಶ್ವಸಂಸ್ಥೆಯ ಮಾಜಿ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲಿ ಚೀನಾದ ಬೆಳೆಯುತ್ತಿರುವ ಪ್ರಭಾವವನ್ನು ಎದುರಿಸುವ ಜಾಗತಿಕ ಪ್ರಯತ್ನದಲ್ಲಿ ಭಾರತವನ್ನು ಪ್ರಜಾಪ್ರಭುತ್ವ ಪಾಲುದಾರ ಎಂದು ಪರಿಗಣಿಸುವ ಮಹತ್ವವನ್ನು ಒತ್ತಿ ಹೇಳಿದ ಬಳಿಕ ಶ್ವೇತಭವನದ ವ್ಯಾಪಾರ ಸಲಹೆಗಾರರ ಈ ಹೇಳಿಕೆ ಹೊರ ಬಿದ್ದಿದೆ. ನ್ಯೂಸ್ವೀಕ್ನಲ್ಲಿನ ತಮ್ಮ ಅಭಿಪ್ರಾಯದ ಲೇಖನದಲ್ಲಿ ಯುಎಸ್ - ಭಾರತ ಸಂಬಂಧಗಳಲ್ಲಿನ 25 ವರ್ಷಗಳ ಆವೇಗವನ್ನು ಹಾನಿಗೊಳಿಸುವುದು ಕಾರ್ಯತಂತ್ರದ ವಿಪತ್ತು ಎಂದು ನಿಕ್ಕಿ ಹ್ಯಾಲಿ ಎಚ್ಚರಿಸಿದ್ದಾರೆ. ಅವರು ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಯೊಂದಿಗೆ ನೇರ ಮಾತುಕತೆ ನಡೆಸುವ ಮೂಲಕ ವೈಮನಸ್ಸನ್ನು ಕಡಿಮೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು. ಏಷ್ಯಾದಲ್ಲಿ ಚೀನಾದ ಪ್ರಾಬಲ್ಯಕ್ಕೆ ಪ್ರತಿಯಾಗಿ ಕಾರ್ಯನಿರ್ವಹಿಸಬಲ್ಲ ಏಕೈಕ ದೇಶ ಭಾರತ ಎಂದು ಹ್ಯಾಲಿ ಪ್ರತಿಪಾದಿಸಿದ್ದರು. ಇದು ಅಮೆರಿಕಕ್ಕೆ ಬಲವಾದ ಪಾಲುದಾರಿಕೆಯನ್ನು ಕಾಪಾಡಿಕೊಳ್ಳಲು ನಿರ್ಣಾಯಕ ಅಂಶವಾಗಿದೆ ಎಂದೂ ಹೇಳಿದ್ದರು. ಇದಲ್ಲದೇ ಭಾರತದ ಮೇಲೆ ತೀವ್ರ ಸುಂಕಗಳನ್ನು ವಿಧಿಸುವ ಅಮೆರಿಕದ ಆಡಳಿತದ ನಿರ್ಧಾರವನ್ನು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್ ತೀವ್ರವಾಗಿ ಟೀಕಿಸಿದ್ದಾರೆ. ಅವುಗಳನ್ನು ವಿಲಕ್ಷಣ ಮತ್ತು ಅಮೆರಿಕದ ವಿದೇಶಾಂಗ ನೀತಿ ಹಿತಾಸಕ್ತಿಗಳ ಸ್ವಯಂ - ವಿನಾಶಕಾರಿ ಎಂದು ಜರಿದಿದ್ದರು. ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಜೆಫ್ರಿ ಸ್ಯಾಚ್ಸ್, ಈ ಸುಂಕಗಳು ಅಮೆರಿಕ - ಭಾರತ ಸಂಬಂಧಗಳನ್ನು ಬಲಪಡಿಸಲು ವರ್ಷಗಳ ಪ್ರಯತ್ನಗಳನ್ನು ಹಾಳುಮಾಡುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಸುಂಕಗಳು ತಂತ್ರವಲ್ಲ, ಆದರೆ ವಿಧ್ವಂಸಕ ಮತ್ತು ಅಮೆರಿಕದ ವಿದೇಶಾಂಗ ನೀತಿಯಲ್ಲಿ ಅತ್ಯಂತ ಮೂರ್ಖತನದ ನಡೆ ಎಂದು ಸ್ಯಾಚ್ಸ್ ಟೀಕಿಸಿದ್ದರು. ಇದು ಬ್ರಿಕ್ಸ್ ದೇಶಗಳನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಒಂದುಗೂಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.