ನವದೆಹಲಿ: 'ಭಾರತಕ್ಕೆ ತಡೆರಹಿತ ಇಂಧನ ಪೂರೈಕೆಯಾಗುವುದನ್ನು ಖಾತ್ರಿಪಡಿಸಲಾಗವುದು' ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಯ ನೀಡಿದ್ದಾರೆ. 'ತೈಲ, ಅನಿಲ, ಕಲ್ಲಿದ್ದಲು ಸೇರಿದಂತೆ ಇಂಧನ ಪೂರೈಕೆಗೆ ಸಂಬಂಧಿಸಿ ರಷ್ಯಾ ನಂಬಲರ್ಹ ರಾಷ್ಟ್ರ. ಭಾರತದ ಆರ್ಥಿಕತೆ ಪ್ರಗತಿಗೆ ಈ ಇಂಧನಗಳನ್ನು ತಡೆರಹಿತವಾಗಿ ಪೂರೈಸಲು ರಷ್ಯಾ ಸಿದ್ಧವಿದೆ' ಎಂದೂ ಪುಟಿನ್ ಹೇಳಿದ್ದಾರೆ. ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡುವಂತೆ ಭಾರತವನ್ನು ಮನವೊಲಿಸುವಲ್ಲಿ ತಾನು ಯಶಸ್ವಿಯಾಗಿ ದ್ದಾಗಿ ಅಮೆರಿಕ ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಪುಟಿನ್ ಅವರ ಈ ಮಾತಿಗೆ ಮಹತ್ವ ಬಂದಿದೆ. 'ಸಣ್ಣ ಹಾಗೂ ಅಗತ್ಯಕ್ಕೆ ತಕ್ಕಂತಹ ಗಾತ್ರದ (ಮಾಡುಲರ್) ಪರಮಾಣು ರಿಯಾಕ್ಟರ್‌ಗಳು ಹಾಗೂ ತೇಲುವ ಅಣು ವಿದ್ಯುತ್ ಸ್ಥಾವರ ನಿರ್ಮಾಣದಲ್ಲಿ ಭಾರತಕ್ಕೆ ಸಹಕಾರ ನೀಡಲು ರಷ್ಯಾ ಉತ್ಸುಕವಾಗಿದೆ. ವೈದ್ಯಕೀಯ ಹಾಗೂ ಕೃಷಿಯಂತಹ ಕ್ಷೇತ್ರ ಗಳಲ್ಲಿ ಪರಮಾಣು ತಂತ್ರಜ್ಞಾನ ಬಳಕೆಗೆ ನೆರವು ನೀಡಲೂ ಸಿದ್ಧ' ಎಂದು ಅವರು ಹೇಳಿದ್ದಾರೆ.
23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ, ಮೋದಿ ಅವರೊಂದಿಗೆ ವ್ಯಾಪಕ ಚರ್ಚೆ ನಡೆಸಿದ ವೇಳೆ ಪುಟಿನ್ ಈ ಭರವಸೆಗಳನ್ನು ನೀಡಿದ್ದಾರೆ. ಭಾರತ ಮತ್ತು ರಷ್ಯಾ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ದೃಢ ಸಂಕಲ್ಪ ಮಾಡಿದ ಉಭಯ ನಾಯಕರು, ಈ ಉದ್ದೇಶ ಸಾಧನೆಗಾಗಿ 5 ವರ್ಷಗಳ ಯೋಜನೆ ಅನುಷ್ಠಾನಕ್ಕೂ ಸಮ್ಮತಿಸಿದರು. ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಿಸುವುದು, ತೈಲ ಸಂಸ್ಕರಣೆ, ಪೆಟ್ರೊಕೆಮಿಕಲ್ ತಂತ್ರಜ್ಞಾನ ಗಳು ಹಾಗೂ ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ, ಎಲ್‌ಎನ್‌ಜಿ ಮತ್ತು ಪಿಎನ್‌ಜಿ ಮೂಲಸೌಕರ್ಯ ಹೆಚ್ಚಿಸುವುದು ಸೇರಿದಂತೆ ಹಲವು ಕ್ಷೇತ್ರ ಗಳಲ್ಲಿ ಸಹಕಾರ ವೃದ್ಧಿಸುವ ಬಗ್ಗೆಯೂ ಅವರು ಸಹಮತ ವ್ಯಕ್ತಪಡಿಸಿದ್ದಾರೆ.