image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರೈಲುಗಳು ಮತ್ತು ನಿಲ್ದಾಣಗಳಲ್ಲಿ ಕಲಬೆರಕೆ ಆಹಾರ ತಡೆಗಟ್ಟಲು ರೈಲ್ವೆಯಿಂದ ಹೊಸ ಕಾನೂನು

ರೈಲುಗಳು ಮತ್ತು ನಿಲ್ದಾಣಗಳಲ್ಲಿ ಕಲಬೆರಕೆ ಆಹಾರ ತಡೆಗಟ್ಟಲು ರೈಲ್ವೆಯಿಂದ ಹೊಸ ಕಾನೂನು

ನವದೆಹಲಿ: ರೈಲುಗಳು ಮತ್ತು ನಿಲ್ದಾಣಗಳಲ್ಲಿ ಅನಧಿಕೃತ ವ್ಯಕ್ತಿಗಳಿಂದ ಕಲಬೆರಕೆ ಆಹಾರ ಮಾರಾಟದ ಬಗ್ಗೆ ಪ್ರಯಾಣಿಕರು ಆಗಾಗ್ಗೆ ಆಕ್ಷೇಪ ಎತ್ತುತ್ತಲೇ ಇರುತ್ತಾರೆ. ಇದನ್ನು ತಡೆಯಲು ರೈಲ್ವೆ ಸಚಿವಾಲಯ ಹೊಸ ಕ್ರಮಕ್ಕೆ ಮುಂದಾಗಿದೆ. ಪರವಾನಗಿ ಪಡೆದ ಸಂಸ್ಥೆಗಳು ಮತ್ತು ಅವುಗಳ ಸಿಬ್ಬಂದಿ ಮಾತ್ರ ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಆಹಾರ, ತಿನ್ನುವ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಅವರೆಲ್ಲರೂ ಕಡ್ಡಾಯವಾಗಿ ಗುರುತಿನ ಚೀಟಿ (ಐಡಿ ಕಾರ್ಡ್) ಹೊಂದಿರಬೇಕು ಎಂದು ಸೂಚಿಸಿದೆ. ಈ ಬಗ್ಗೆ ಎಲ್ಲಾ ವಲಯಗಳಿಗೆ ಸುತ್ತೋಲೆ ಹೊರಡಿಸಿರುವ ರೈಲ್ವೆ ಸಚಿವಾಲಯವು ತಕ್ಷಣಕ್ಕೆ ಜಾರಿಗೆ ಬರುವಂತೆ ಎಲ್ಲ ಮಾರಾಟಗಾರರಿಗೆ ಗುರುತಿನ ಚೀಟಿಗಳನ್ನು ನೀಡಲು ಆದೇಶಿಸಿದೆ.

ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಮಾರಾಟ ಮಾಡಲಾಗುವ ಕಲಬೆರಕೆ ಆಹಾರ ಉತ್ಪನ್ನಗಳಿಂದ ಪ್ರಯಾಣಿಕರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಇದಕ್ಕೆ ಕಾರಣವಾದ ಅನಧಿಕೃತ ವ್ಯಕ್ತಿಗಳ ವಿರುದ್ಧ ಕ್ರಮದ ಅಗತ್ಯವಿದೆ. ಪ್ರಯಾಣಿಕರ ಆಗ್ರಹದ ಮೇರೆಗೆ ಸಮಸ್ಯೆಯನ್ನು ಪರಿಗಣಿಸಿರುವ ರೈಲ್ವೆ ಮಂಡಳಿಯು ಇದಕ್ಕೆ ಕಡಿವಾಣ ಹಾಕಲು ಹೊಸ ಕ್ರಮಕ್ಕೆ ಮುಂದಾಗಿದೆ ಎಂದು ರೈಲ್ವೆ ವಾಣಿಜ್ಯ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ರೈಲ್ವೆ ವಲಯಗಳಿಗೆ ಜುಲೈ 17 ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ, ರೈಲುಗಳ ಒಳಗೆ ಅಥವಾ ನಿಲ್ದಾಣಗಳಲ್ಲಿ ವಿವಿಧ ಸೇವೆಗಳನ್ನು ಒದಗಿಸಲು ಪರವಾನಗಿ ಪಡೆದಿರುವ ಕಂಪನಿಗಳ ಎಲ್ಲಾ ಅಧಿಕೃತ ಮಾರಾಟಗಾರರು, ಸಹಾಯಕರು, ಸಿಬ್ಬಂದಿಗೆ ರೈಲ್ವೆ ಆಡಳಿತ ಅಥವಾ ಐಆರ್​ಸಿಟಿಸಿಯು ಆಯಾ ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣೀಕೃತ ಗುರುತಿನ ಚೀಟಿಗಳನ್ನು ನೀಡಬೇಕು ಎಂದು ಸೂಚಿಸಿದೆ.

ಗುರುತಿನ ಚೀಟಿಯಲ್ಲಿ ವ್ಯಕ್ತಿಯ ಹೆಸರು, ಆಧಾರ್ ಸಂಖ್ಯೆ, ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ಮತ್ತು ಅದರ ಸಿಂಧುತ್ವ ದಿನಾಂಕ, ನಿಯೋಜನೆಯ ಘಟಕ, ಪೊಲೀಸ್ ಪರಿಶೀಲನಾ ದಿನಾಂಕ, ಅದರ ಸಿಂಧುತ್ವ ಮತ್ತು ಪರವಾನಗಿ ಪಡೆದ ಸಂಸ್ಥೆಯ ಹೆಸರನ್ನು ಪ್ರದರ್ಶಿಸಬೇಕು. ಗುರುತಿನ ಚೀಟಿಗಳಿಗೆ ಆಯಾ ನಿಲ್ದಾಣದ ಸೂಪರಿಂಟೆಂಡೆಂಟ್, ನಿಲ್ದಾಣದ ವ್ಯವಸ್ಥಾಪಕರು ಅಥವಾ IRCTC ಯ ಅಧಿಕೃತ ಅಧಿಕಾರಿಯ ಸಹಿ ಇರಬೇಕು. ಗುರುತಿನ ಚೀಟಿಗಳನ್ನು ಸರಿಯಾದ ಪ್ರಕ್ರಿಯೆಯ ನಂತರವೇ ಮಾರಾಟಗಾರರು, ಸಹಾಯಕರು, ಸಿಬ್ಬಂದಿಯ ಹೆಸರಿನಲ್ಲಿ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾಯಂ ಸಿಬ್ಬಂದಿಯ ರಜೆ, ಇನ್ನಿತರ ಸಂದರ್ಭದಲ್ಲಿ ಮೀಸಲು ಮಾರಾಟಗಾರರು, ಸಹಾಯಕರಿಗೆ ಈ ಗುರುತಿನ ಚೀಟಿಗಳನ್ನು ನೀಡಬೇಕು. ಯಾವುದೇ ಮಾರಾಟಗಾರರು ರೈಲು ಮತ್ತು ನಿಲ್ದಾಣಗಳಲ್ಲಿ ಗುರುತಿನ ಚೀಟಿಯನ್ನು ಪ್ರದರ್ಶಿಸದೆ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿದೆ.

Category
ಕರಾವಳಿ ತರಂಗಿಣಿ