ನವದೆಹಲಿ: ಆಪರೇಷನ್ ಸಿಂಧೂರ್ ಹಾಗೂ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ವಿಪಕ್ಷಗಳು ಚರ್ಚೆಗೆ ಆಗ್ರಹಿಸಿ ಇಂದು ಕೂಡ ಪ್ರತಿಭಟನೆ ನಡೆಸಿದ ಹಿನ್ನೆಲೆ ಸಂಸತ್ತಿನ ಉಭಯ ಸದನಗಳನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಂಸದರು ಬ್ಯಾನರ್ ಮತ್ತು ಫಲಕಗಳನ್ನು ಹಿಡಿದು ಸದನದ ಬಾವಿಯೊಳಗೆ ಬಂದು ಗದ್ದಲವನ್ನುಂಟು ಮಾಡಿದ ಹಿನ್ನೆಲೆ ಸ್ಪೀಕರ್ ಓಂ ಬಿರ್ಲಾ ಮಧ್ಯಾಹ್ನದವರೆಗೆ ಕಲಾಪನ್ನು ಮುಂದೂಡಿದರು. ಪ್ರಶ್ನೋತ್ತರ ಕಲಾಪದ ವೇಳೆ ಉಂಟಾದ ತೀವ್ರ ಗದ್ದಲದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್, ವಿರೋಧ ಪಕ್ಷದ ಸದಸ್ಯರು ಉದ್ದೇಶಪೂರ್ವಕವಾಗಿ ಸದನದ ಕಲಾಪಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದರು. ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕರಿಗೆ ಫಲಕಗಳನ್ನು ಪ್ರದರ್ಶಿಸದಂತೆ ಸೂಚನೆ ನೀಡಬೇಕು ಎಂದರು.
ಈ ರೀತಿಯ ಪ್ರತಿಭಟನೆಗಳು ಸದನದ ಘನತೆಯನ್ನು ಕಡಿಮೆಗೊಳಿಸುತ್ತದೆ. ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರು ಮಾತನಾಡಲು ಅವಕಾಶವಿಲ್ಲ. ಸದನದಲ್ಲಿ ನಡೆಯುತ್ತಿರುವ ಈ ಗದ್ದಲಗಳು ಉದ್ದೇಶಪೂರ್ವಕವಾಗಿದ್ದು, ದೇಶದ ಜನರು ನೋಡುತ್ತಿದ್ದಾರೆ ಎಂದರು. ಈ ವೇಳೆ ಸದನವನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್, ಸದಸ್ಯರು ಸದನಕ್ಕೆ ಅಡ್ಡಿ ಉಂಟು ಮಾಡಬೇಕೆ? ಆಪರೇಷನ್ ಸಿಂಧೂರ್ ಕುರಿತು ಚರ್ಚಿಸಬೇಕೇ ಎಂದು ಪ್ರಶ್ನಿಸಿದರು. ಸರ್ವ ಪಕ್ಷ ಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ಮಾತನಾಡಲು ಅನುಮತಿ ಕೇಳಿದ್ದೀರಿ. ಈಗ ನೋಡಿದರೆ, ಸದನಕ್ಕೆ ಅಡ್ಡಿಯುಂಟು ಮಾಡಲಾಗುತ್ತಿದೆ. ಪ್ರಶ್ನೋತ್ತರ ಅವಧಿಯು ಸದಸ್ಯರ ಪ್ರಮುಖ ಸಮಯವಾಗಿದೆ ಎಂದು ತಿಳಿಸಿದ ಅವರು, ಸದನವನ್ನು ಮುಂದೂಡಿಕೆ ಮಾಡಿದರು. ರಾಜ್ಯಸಭೆಯಲ್ಲೂ ಉತ್ತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕುರಿತಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ನೋಟಿಸ್ ನೀಡಲಾಯಿತು. ಆದರೆ ಇದಕ್ಕೆ ಸಭಾಪತಿಗಳು ನಿರಾಕರಿಸಿದ್ದರಿಂದ ಕೋಲಾಹಲವುಂಟಾಯಿತು. ಇದರಿಂದ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಸದನವನ್ನು ಮುಂದೂಡಿಕೆ ಮಾಡಿದರು.
ಉತ್ತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ದೊಡ್ಡ ಪ್ರಮಾಣದಲ್ಲಿ ವಿಲೀನ ಮಾಡಲಾಗುತ್ತಿದೆ ಇಲ್ಲವೇ ಮುಚ್ಚಲಾಗುತ್ತಿದೆ. ಇದು ಶಿಕ್ಷಣದ ಹಕ್ಕಿನ ಉಲ್ಲಂಘನೆ ಆಗಲಿದೆ ಎಂಬ ಕುರಿತು ಚರ್ಚೆಗೆ ಸಂಜಯ್ ಸಿಂಗ್ ನೋಟಿಸ್ ನೀಡಿ ಒತ್ತಾಯಿಸಿದರು. ಈ ನೋಟಿಸ್ಗಳು ಅಧ್ಯಕ್ಷರು ನೀಡಿದ ವಿವರವಾದ ನಿರ್ದೇಶನಗಳಿಗೆ ಅನುಗುಣವಾಗಿಲ್ಲದ ಕಾರಣ ಅವುಗಳನ್ನು ತಿರಸ್ಕರಿಸಲಾಯಿತು. ಬಿಹಾರದಲ್ಲಿ ಎಸ್ಐಆರ್ ಮತ್ತು ಇತರ ರಾಜ್ಯಗಳಲ್ಲಿ ಬಂಗಾಳಿಗಳ ವಿರುದ್ಧದ ತಾರತಮ್ಯ ಆರೋಪ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ನೀಡಿದ 26 ನೋಟಿಸ್ ಗಳನ್ನು ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ತಿರಸ್ಕರಿಸಿದರು. ಸಭಾಧ್ಯಕ್ಷರು ನೋಟಿಸ್ ಗಳನ್ನು ತಿರಸ್ಕರಿಸಿದ್ದನ್ನು ವಿರೋಧಿಸಿ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಮದ್ಯಾಹ್ನದ ನಂತರ ಮತ್ತೆ ಪ್ರಾರಂಭ.