ಜಮ್ಮು ಕಾಶ್ಮೀರ : ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಾಲ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಉಗ್ರರೊಂದಿಗಿನ ಗುಂಡಿನ ಚಕಮಕಿಯು ಶನಿವಾರ 9ನೇ ದಿನಕ್ಕೆ ಕಾಲಿಟ್ಟಿದ್ದು, ಇತ್ತೀಚಿನ ವರ್ಷಗಳಲ್ಲಿ ಕಣಿವೆ ನಾಡಿನಲ್ಲಿ ನಡೆದ ಸುದೀರ್ಘವಾದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಇದು ಒಂದಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಹುತಾತ್ಮರಾದ ಸೈನಿಕರನ್ನು ಲ್ಯಾನ್ಸ್ ನಾಯಕ್ ಪ್ರೀತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆಗಸ್ಟ್ 1ರಂದು ಪ್ರಾರಂಭವಾದ ಕಾರ್ಯಾಚರಣೆಯಲ್ಲಿ, ಇಲ್ಲಿಯವರೆಗೆ ಕನಿಷ್ಠ ಒಂಬತ್ತು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೊದಲ ಎರಡು ದಿನಗಳಲ್ಲಿ ಇಬ್ಬರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ ಎಂದು ಭಾರತೀಯ ಸೇನೆ ದೃಢಪಡಿಸಿದೆ. ''ರಾಷ್ಟ್ರಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರ ಯೋಧರಾದ ಲ್ಯಾನ್ಸ್ ನಾಯಕ್ ಪ್ರೀತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಅವರ ಅತ್ಯುನ್ನತ ತ್ಯಾಗವನ್ನು ಕುಲ್ಗಾಮ್ ಚಿನಾರ್ ಕಾರ್ಪ್ಸ್ ಗೌರವಿಸುತ್ತದೆ. ಸೇನಾನಿಗಳ ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತ ಸ್ಫೂರ್ತಿ ನೀಡುತ್ತದೆ. ಭಾರತೀಯ ಸೇನೆಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಮತ್ತು ಮೃತರ ಕುಟುಂಬಗಳೊಂದಿಗೆ ನಿಲ್ಲುತ್ತದೆ. ಕಾರ್ಯಾಚರಣೆ ಮುಂದುವರೆದಿದೆ" ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಅಖಾಲ್‌ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದು, ಎನ್‌ಕೌಂಟರ್ ಪ್ರಾರಂಭವಾಗಿದೆ. ಕಳೆದ ಶುಕ್ರವಾರದಿಂದಲೂ ಗುಂಡಿನ ಚಕಮಕಿ ನಡೆಯುತ್ತಿದೆ. ಹೀಗಾಗಿ, ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಲಾಯಿತು. ಮರುದಿನ ಗುಂಡಿನ ದಾಳಿ ಪುನರಾರಂಭವಾದಾಗ, ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದರು. ಹತ್ಯೆಗೀಡಾದ ಭಯೋತ್ಪಾದಕರ ಗುರುತು ಮತ್ತು ಹಿನ್ನೆಲೆಯ ಕುರಿತು ಇನ್ನೂ ಖಚಿತವಾಗಿಲ್ಲ. ದಟ್ಟ ಕಾಡುಗಳಲ್ಲಿ ಅಡಗಿರುವ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಸುತ್ತುವರೆದು ಹೋರಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ನಳಿನ್ ಪ್ರಭಾತ್ ಮತ್ತು ಸೇನೆಯ ಉತ್ತರ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಸೇರಿದಂತೆ ಹಿರಿಯ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ಕಾರ್ಯಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಡ್ರೋನ್ ಮತ್ತು ಹೆಲಿಕಾಪ್ಟರ್‌ಗಳ ನೆರವು ಪಡೆದಿವೆ. ಅಡಗಿರುವ ಉಗ್ರರನ್ನು ತಟಸ್ಥಗೊಳಿಸಲು ಭದ್ರತಾ ಪಡೆಗಳಿಗೆ ಪ್ಯಾರಾ ಕಮಾಂಡೋಗಳು ಸಾಥ್ ನೀಡುತ್ತಿವೆ.