ಹೈದರಾಬಾದ್: ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಸಮರ ಸಾರಿರುವ ಹೈದರಾಬಾದ್ ಪೊಲೀಸರು, ಈ ವರ್ಷ ಇದುವರೆಗೆ 30 ಬಾಂಗ್ಲಾದೇಶಿ ಯುವತಿಯರು ಸೇರಿದಂತೆ 60 ಜನರನ್ನು ಗುರುತಿಸಿದ್ದಾರೆ. ಮಾವನ ಕಳ್ಳ ಸಾಗಾಣಿಕೆಗೆ ಮಹಿಳೆಯರು, ಅಪ್ರಾಪ್ತರು, ಬಡವರು ಬಲಿಯಾಗುತ್ತಿದ್ದು, ಇದನ್ನು ಮನಗಂಡ ಹೈದರಾಬಾದ್ ಪೊಲೀಸರು, ಅಕ್ರಮ ವಿದೇಶಿ ನುಸುಳುಕೋರರ ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಉದ್ಯೋಗದ ಆಸೆ ತೋರಿಸಿ ಯುವತಿಯರನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಇತ್ತೀಚೆಗೆ ವೇಶ್ಯಾವಾಟಿಕೆ ಬಂಡ್ಲಗುಡದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಬಾಂಗ್ಲಾದೇಶದ ಮಹಿಳೆಯರು ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿತ್ತು. ಈ ವೇಶ್ಯಾವಾಟಿಕೆ ಜಾಲದ ಹಿನ್ನೆಲೆ ಬಗ್ಗೆ ಪರಿಶೀಲಿಸಿದಾಗ ಸ್ಥಳೀಯ ಏಜೆಂಟರು ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲಗಳೊಂದಿಗೆ ಸಂಬಂಧ ಹೊಂದಿರುವುದು ಗೊತ್ತಾಗಿತ್ತು. ಆಗ್ನೇಯ ಡಿಸಿಪಿ ಚೈತನ್ಯ ಕುಮಾರ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಹ 30ಕ್ಕೂ ಹೆಚ್ಚು ಏಜೆಂಟರ ಪಟ್ಟಿಯನ್ನು ಸಂಗ್ರಹಿಸಿರುವುದಾಗಿ ವರದಿಯಾಗಿದೆ.
ಉದ್ಯೋಗದ ಭರವಸೆ ನೀಡಿ ಯುವತಿಯರನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿರುವ ಅನುಮಾನ ವ್ಯಕ್ತವಾಗಿತ್ತು. ಕೆಲವು ಸ್ಥಳೀಯ ಗ್ಯಾಂಗ್ಗಳು ಮುಗ್ಧ ಯುವತಿಯರನ್ನು ಭಾರತದ ಕೋಲ್ಕತ್ತಾ ಮತ್ತು ಹೈದರಾಬಾದ್ನಂತಹ ನಗರಗಳಿಗೆ ಅಕ್ರಮವಾಗಿ ಸಾಗಿಸಿ ಅವರನ್ನು ಗುಲಾಮಿ ಕಾರ್ಮಿಕರು ಮತ್ತು ಮನೆ ಕೆಲಸಗಾರರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಇದಲ್ಲದೇ, ಸುಂದರವಾದ ಯುವತಿಯರನ್ನು ಡ್ಯಾನ್ಸ್ ಬಾರ್ಗಳು, ಮಸಾಜ್ ಪಾರ್ಲರ್ಗಳು ಮತ್ತು ವೇಶ್ಯಾಗೃಹಗಳಿಗೆ ಮಾರಾಟ ಮಾಡುತ್ತಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಈ ವರ್ಷ, ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ ವಿದೇಶಿಯರನ್ನು ಗುರುತಿಸಲು ಪೊಲೀಸರು ವಿಶೇಷ ಕ್ರಮಗಳನ್ನು ತೆಗೆದುಕೊಂಡಿದ್ದರು. ಇಲ್ಲಿಯವರೆಗೆ ಗುರುತಿಸಲಾದ 60 ಜನರಲ್ಲಿ 30 ಮಂದಿ ಬಾಂಗ್ಲಾದೇಶದ ಹುಡುಗಿಯರನ್ನು ಗುರುತಿಸಲಾಗಿದೆ. ಇತ್ತೀಚೆಗೆ, ಬಾಂಗ್ಲಾದೇಶದ ಹುಡುಗಿಯರೊಂದಿಗೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗ್ಯಾಂಗ್ವೊಂದನ್ನು ಬಂಡ್ಲಗುಡದಲ್ಲಿ ಬಂಧಿಸಲಾಗಿದೆ. ಈ ವೇಳೆ ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ನಗರದ ಏಜೆಂಟರು ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಗ್ಯಾಂಗ್ಗಳೊಂದಿಗೆ ಸಂಪರ್ಕ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ನಗರದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಏಜೆಂಟರ ವಿವರಗಳನ್ನು ಸಂಗ್ರಹಿಸಲಾಗಿದೆ ಎಂದು ಆಗ್ನೇಯ ಡಿಸಿಪಿ ಚೈತನ್ಯ ಕುಮಾರ್ ಮಾಹಿತಿ ನೀಡಿದರು.
ಬಾಂಗ್ಲಾದೇಶದ ಬಡ ಹುಡುಗಿಯೊಬ್ಬಳನ್ನು (15) ದಲ್ಲಾಳಿಗಳು ಉದ್ಯೋಗ ನೀಡುವ ನೆಪದಲ್ಲಿ ಕರೆತಂದು ವೇಶ್ಯಾವಾಟಿಕೆಯ ಜಾಲಕ್ಕೆ 20,000 ರೂ.ಗೆ ಮಾರಾಟ ಮಾಡಿದ್ದರು. ಈ ವಿಷಯ ತಿಳಿದ ಪೊಲೀಸರು ಆ ಬಾಲಕಿಯನ್ನು ರಕ್ಷಿಸಿದ್ದಾರೆ. ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ, ಅವರು 20 ಬಾಂಗ್ಲಾದೇಶದ ಹುಡುಗಿಯರನ್ನು ಹುಡುಕುತ್ತಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಬಾಂಗ್ಲಾದೇಶಿ ಹುಡುಗಿಯನ್ನು ಮಹಿಳೆಯೊಬ್ಬರು ಬಂಡ್ಲಗುಡದಲ್ಲಿರುವ ವೇಶ್ಯಾಗೃಹಕ್ಕೆ ಒಪ್ಪಿಸಿದ್ದರು. ಈ ಪ್ರಕರಣ ಕೂಡ ಪೊಲೀಸರ ಗಮನಕ್ಕೆ ಬಂದಿತ್ತು. ಇದಕ್ಕೂ ಮುನ್ನ ಪಹಾಡಿ ಷರೀಫ್ ಮತ್ತು ಚತ್ರಿನಕಾದಲ್ಲಿ ವೇಶ್ಯಾವಾಟಿಕೆ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು 9 ಯುವ ಬಾಂಗ್ಲಾದೇಶಿ ಮಹಿಳೆಯರನ್ನು ರಕ್ಷಿಸಿದ್ದರು. ಫೆಬ್ರವರಿಯಲ್ಲಿ, 20 ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದ ಪೊಲೀಸರು 16 ಮಾನವ ಕಳ್ಳಸಾಗಣೆದಾರರು ಮತ್ತು ವೇಶ್ಯಾಗೃಹ ನಿರ್ವಾಹಕರನ್ನು ಬಂಧಿಸಿದ್ದರು.