ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ಗುರುವಾರ ಭಾರೀ ಮೇಘಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿರುವ ಶಂಕೆ ಇದ್ದು, ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ''ಮಚೈಲ್ ಮಾತಾ ದೇವಾಲಯದ ಬಳಿಯ ಚಶೋತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ಸಾವುನೋವುಗಳಿಗೆ ಕಾರಣವಾಗಬಹುದು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಶೋತಿ ಗ್ರಾಮದಲ್ಲಿರುವ ಹಿಂದೂ ದೇವಾಲಯವಾದ ಮಚೈಲ್ ಮಾತಾ ದೇವಸ್ಥಾನದ ಲಂಗರ್ನಲ್ಲಿ ಭಕ್ತರು ಊಟ ಮಾಡುತ್ತಿದ್ದರು. ಮಧ್ಯಾಹ್ನ 12:30ರ ಸುಮಾರಿಗೆ ಭಾರೀ ಶಬ್ದದೊಂದಿಗೆ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಚೈಲ್ ಮಾತಾ ಯಾತ್ರೆಗಾಗಿ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು. ಅಲ್ಲಿಂದ ದೇವಾಲಯಕ್ಕೆ 8.5 ಕಿ.ಮೀ. ಪಾದಯಾತ್ರೆ ಪ್ರಾರಂಭವಾಗುತ್ತದೆ. ಹನ್ನೆರಡು ಶವಗಳನ್ನು ಪತ್ತೆಹಚ್ಚಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಸೋಟಿ 9,500 ಅಡಿ ಎತ್ತರದಲ್ಲಿ ಮತ್ತು ಕಿಶ್ತ್ವಾರದಿಂದ ಸುಮಾರು 90 ಕಿ.ಮೀ ದೂರದಲ್ಲಿದೆ. ಕಿಶ್ತ್ವಾರ್ನ ಚಶೋತಿ ಪ್ರದೇಶದಲ್ಲಿ ಭಾರೀ ಮೇಘಸ್ಫೋಟದ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, "ಜಮ್ಮುವಿನ ಕಿಶ್ತ್ವಾರ್ ಪ್ರದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಲು ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಸುದ್ದಿ ಬೇಸರ ತರಿಸಿದೆ. ರಕ್ಷಣಾ ಕಾರ್ಯಾಚರಣೆಗಳನ್ನು ನಿರ್ವಹಿಸಲು ಜಮ್ಮು ಮತ್ತು ಕಾಶ್ಮೀರದ ಒಳಗೆ ಮತ್ತು ಹೊರಗೆ ಎಲ್ಲಾ ಸಂಭಾವ್ಯ ಸಂಪನ್ಮೂಲಗಳನ್ನು ಸಜ್ಜುಗೊಳಿಸಲಾಗುತ್ತಿದೆ" ಎಂದು ಹೇಳಿದ್ದಾರೆ. "ಚೋಸಿತಿ ಪ್ರದೇಶದಲ್ಲಿ ಭಾರೀ ಮೋಡ ಕವಿದ ವಾತಾವರಣ ಉಂಟಾಗಿದ್ದು, ಭಾರೀ ಪ್ರಮಾಣದ ಸಾವು-ನೋವು ಸಂಭವಿಸಬಹುದು. ಆಡಳಿತವು ತಕ್ಷಣ ಕಾರ್ಯಪ್ರವೃತ್ತವಾಗಿದೆ. ರಕ್ಷಣಾ ತಂಡವು ಸ್ಥಳಕ್ಕೆ ತೆರಳಿದೆ" ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು X ಪೋಸ್ಟ್ನಲ್ಲಿ ತಿಳಿಸಿದ್ದಾರೆ. "ಈ ಬಗ್ಗೆ ಕಿಶ್ತ್ವಾರ ಉಪ ಆಯುಕ್ತ ಪಂಕಜ್ ಕುಮಾರ್ ಶರ್ಮಾ ಅವರೊಂದಿಗೆ ಮಾತನಾಡಿದ್ದೇನೆ" ಎಂದು ಸಹ ಅವರು ಹೇಳಿದ್ದಾರೆ.
"ಇಲ್ಲಿಯವರೆಗೆ, 22 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡವರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕಾಣೆಯಾದವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯೂ ನಡೆಯುತ್ತಿದೆ. ಆದರೆ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಎಷ್ಟು ಜನರು ಕಾಣೆಯಾಗಿದ್ದಾರೆ ಎಂಬುದರ ಕುರಿತು ಯಾವುದೇ ಅಂಕಿಅಂಶಗಳಿಲ್ಲ" ಎಂದು ಕಿಶ್ತ್ವಾರ್ ಉಪ ಆಯುಕ್ತ ಪಂಕಜ್ ಕುಮಾರ್ ಶರ್ಮಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. "ದುರಂತದ ನಂತರ ದೇವಾಲಯಕ್ಕೆ ವಾರ್ಷಿಕ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ NDRFನ ಎರಡು ತಂಡಗಳನ್ನು ಉಧಂಪುರದಿಂದ ಕಿಶ್ತ್ವಾರಕ್ಕೆ ರವಾನಿಸಲಾಗಿದೆ. ಪ್ರದೇಶದಲ್ಲಿ ಬೃಹತ್ ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ" ಎಂದು ಸ್ಥಳಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.