ಹೊಸದಿಲ್ಲಿ: ಲೇಸರ್ ಕಿರಣಗಳ ಮೂಲಕ ವಾಯು ಮಾರ್ಗದಲ್ಲಿ ಬರುವ ಶತ್ರು ದೇಶದ ಶಸ್ತ್ರಾಸ್ತ್ರಗಳನ್ನು ಹೊಡೆದುರುಳಿಸು ವಂತಹ ಲೇಸರ್ ವಾಯುರಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಇಸ್ರೇಲ್ ಈಗ ರಕ್ಷಣ ತಂತ್ರ ಜ್ಞಾನದಲ್ಲಿ ಮತ್ತೂಂದು ಮಹತ್ವದ ಕ್ರಾಂತಿಗೆ ನಾಂದಿ ಹಾಡಿದೆ. ಇಸ್ರೇಲ್‌ನ ಬಹು ಸ್ತರ ವಾಯು ರಕ್ಷಣ ವ್ಯವಸ್ಥೆಗೆ ಇದು ಹೊಸ ಸೇರ್ಪಡೆಯಾಗಿದ್ದು, ಇದು ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್, ಆಯರೋ ಸಿಸ್ಟಂ ಜತೆಗೆ ಕೆಲಸ ಮಾಡಲಿದೆ. ಈ ಐರನ್ ಬೀಮ್ ಲೇಸರ್ ವ್ಯವಸ್ಥೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಮಿಲಿಟರಿ ಯುದ್ಧದ ಕಾರ್ಯತಂತ್ರವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಲೇಸರ್ ಕಿರಣಗಳು ರಾಕೆಟ್, ಡ್ರೋನ್ ಮತ್ತು ಮಾರ್ಟರ್‌ಗಳನ್ನು ಕ್ಷಣಮಾತ್ರದಲ್ಲಿ ನಾಶಪಡಿಸಲು ಸಮರ್ಥವಾಗಿವೆ. ಇಸ್ರೇಲ್ ರಕ್ಷಣ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ, ರಫೇಲ್ ಮತ್ತು ಎಲ್ಬಿಟ್ ಸಿಸ್ಟಮ್ಸ್ ಸಹಯೋಗದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ದಕ್ಷಿಣ ಇಸ್ರೇಲ್‌ನಲ್ಲಿ ನಡೆದ ಪರೀಕ್ಷೆಯೂ ಯಶಸ್ವಿಯಾಗಿದೆ. ವರ್ಷಾಂತ್ಯದಲ್ಲಿ ಇದನ್ನು ಕಾರ್ಯಾಚರಣೆಗೆ ನಿಯೋಜಿಸುವ ನಿರೀಕ್ಷೆ ಇದೆ.