ನವದೆಹಲಿ: ಪಾಕಿಸ್ತಾನದೊಂದಿನ ಸಿಂಧೂ ನದಿ ಒಪ್ಪಂದ ರದ್ದುಗೊಳಿಸಿದ ಕೇಂದ್ರ ಸರ್ಕಾರ, ನದಿಯ ಹೆಚ್ಚುವರಿ ನೀರನ್ನು ಪಾಕಿಸ್ತಾನಕ್ಕೆ ಹರಿಬಿಡುವ ಬದಲಾಗಿ ಉತ್ತರ ಭಾರತದೆಡೆಗೆ ತಿರುಗಿಸಲು ಮುಂದಾಗಿದೆ. ಇದಕ್ಕಾಗಿ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದ್ದು, 2029ರ ಲೋಕಸಭೆ ಚುನಾವಣೆಯೊಳಗೆ ಜಾರಿಗೊಳಿಸುವ ಗುರಿಯಿಟ್ಟುಕೊಂಡಿದೆ ಎಂದು ವರದಿಯಾಗಿದೆ. ಈ ಸಂಬಂಧ ಕೇಂದ್ರ ಸಚಿವ ಅಮಿತ್ ಶಾ, ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನೊಳಗೊಂಡ ಅಧಿಕಾರಿಗಳ ಸಭೆ ನಡೆದಿದ್ದು, ಸಿಂಧೂ ನದಿಯನ್ನು ಬಿಯಾಸ್ ನದಿಯೊಂದಿಗೆ ಜೋಡಿಸುವ 14 ಕಿ.ಮೀ. ಉದ್ದದ ಸುರಂಗ ನಿರ್ಮಾಣಕ್ಕೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುತ್ತಿರುವುದನ್ನು ತಿಳಿಸಲಾಗಿದೆ. ಹಿಮಾಲಯದ ಪರ್ವತದಂತಹ ದುರ್ಗಮ ಪ್ರದೇಶಗಳಲ್ಲಿ ಸುರಂಗ ನಿರ್ಮಾಣದ ಜವಾಬ್ದಾರಿಯನ್ನು ಎಲ್ ಆಯಂಡ್ ಟಿ ಸಂಸ್ಥೆಗೆ ನೀಡಲಾಗಿದೆ. ಇದರ ಜತೆಗೆ ಉತ್ತರ ಭಾರತದ ರಾಜ್ಯಗಳಿಗೆ ನೀರು ಪೂರೈಸುವ ಉದ್ದೇಶಿತ 113 ಕಿ.ಮೀ. ಉದ್ದದ ಕಾಲುವೆಯ ಕೆಲಸವನ್ನೂ ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ. ಈ ಎಲ್ಲಾ ಯೋಜನೆಗಳು ಜಾರಿಯಾದಲ್ಲಿ ರಾಜಸ್ಥಾನ, ದೆಹಲಿ, ಪಂಜಾಬ್, ಹರ್ಯಾಣ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.