image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪುಟಿನ್ ಭೇಟಿಗೆ ಕ್ಯಾತೆ ತೆಗೆದ ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದ ಜೈಶಂಕರ್

ಪುಟಿನ್ ಭೇಟಿಗೆ ಕ್ಯಾತೆ ತೆಗೆದ ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದ ಜೈಶಂಕರ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಇತ್ತೀಚಿನ ಭಾರತ ಭೇಟಿ ಜಾಗತಿಕ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ನವದೆಹಲಿ ಮತ್ತು ಮಾಸ್ಕೋ ನಡುವಿನ ದಶಕಗಳ ಹಳೆಯ ಸ್ನೇಹ ಮತ್ತಷ್ಟು ಗಟ್ಟಿಯಾಗಿರುವುದನ್ನು ಕಂಡು ಅಮೆರಿಕ ಅಸಮಾಧಾನಗೊಂಡಿದೆ. ಭಾರತದ ಈ ನಡೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ಅಪಸ್ವರ ಎತ್ತಿದ್ದರು. ಅಮೆರಿಕದ ಈ ಅಸಮಾಧಾನಕ್ಕೆ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅತ್ಯಂತ ಕಟುವಾದ ಮತ್ತು ಸ್ಪಷ್ಟವಾದ ಮಾತುಗಳಲ್ಲಿ ತಿರುಗೇಟು ನೀಡುವ ಮೂಲಕ ಭಾರತದ ಸಾರ್ವಭೌಮತ್ವವನ್ನು ಜಗತ್ತಿನ ಮುಂದೆ ಎತ್ತಿ ಹಿಡಿದಿದ್ದಾರೆ.

ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಆತ್ಮೀಯ ಮಾತುಕತೆಗಳು ಅಮೆರಿಕದ ಕಣ್ಣು ಕೆಂಪಾಗಿಸಿವೆ. ಉಭಯ ನಾಯಕರ ಭೇಟಿಯ ಬಗ್ಗೆ ಅಮೆರಿಕ ತನ್ನ ಅಸಮಾಧಾನವನ್ನು ಹೊರಹಾಕುತ್ತಿರುವ ಸಂದರ್ಭದಲ್ಲೇ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನೀಡಿರುವ ಹೇಳಿಕೆ ಅಮೆರಿಕದ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಜಗತ್ತಿನ ಬಲಾಢ್ಯ ರಾಷ್ಟ್ರ ಎಂಬ ಅಹಂಕಾರದಲ್ಲಿರುವ ಅಮೆರಿಕಕ್ಕೆ, ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಯಾರ ಹಸ್ತಕ್ಷೇಪವನ್ನೂ ಸಹಿಸುವುದಿಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ. ಜೈಶಂಕರ್ ಅವರು ತಮ್ಮ ಹೇಳಿಕೆಯಲ್ಲಿ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದು, ಭಾರತವು ತನ್ನ ಜಾಗತಿಕ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದೆ. ಯಾವುದೇ ಒಂದು ದೇಶವು ಮತ್ತೊಂದು ದೇಶದೊಂದಿಗಿನ ಭಾರತದ ಸಂಬಂಧಗಳ ಮೇಲೆ ವೀಟೋ ಅಥವಾ ನಿಷೇಧ ಹೇರುವ ಅಧಿಕಾರವನ್ನು ಹೊಂದಿಲ್ಲ. ಇಂತಹ ಅಧಿಕಾರವನ್ನು ಭಾರತ ಯಾರಿಗೂ ನೀಡಿಲ್ಲ ಮತ್ತು ಮುಂದೆಯೂ ನೀಡುವುದಿಲ್ಲ. ಜಾಗತಿಕವಾಗಿ ನಮ್ಮ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳುವ ನಮ್ಮ ಹಕ್ಕನ್ನು ಮತ್ತು ಸಾರ್ವಭೌಮತ್ವವನ್ನು ಪ್ರಶ್ನಿಸುವ ಅಧಿಕಾರ ಅಮೆರಿಕ ಸೇರಿದಂತೆ ಜಗತ್ತಿನ ಯಾವ ದೇಶಕ್ಕೂ ಇಲ್ಲ ಎಂದು ಗುಡುಗಿದ್ದಾರೆ.

ರಷ್ಯಾ ಅಧ್ಯಕ್ಷರ ಭೇಟಿಯು ಅಮೆರಿಕದೊಂದಿಗಿನ ಭಾರತದ ಸಂಬಂಧವನ್ನು ಹದಗೆಡಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಪಾಶ್ಚಿಮಾತ್ಯ ಮಾಧ್ಯಮಗಳ ವರದಿಗಾರಿಕೆಗೂ ಚಾಟಿ ಬೀಸಿದ್ದಾರೆ. ನಾನು ವ್ಲಾಡಿಮಿರ್ ಪುಟಿನ್ ಅವರ ವ್ಯಕ್ತಿತ್ವ ಅಥವಾ ರಷ್ಯಾದೊಂದಿಗಿನ ಸಂಬಂಧವನ್ನು ಮೌಲ್ಯಮಾಪನ ಮಾಡುವಾಗ ಪಾಶ್ಚಿಮಾತ್ಯ ಪತ್ರಿಕೆಗಳ ಅಭಿಪ್ರಾಯವನ್ನು ಅವಲಂಬಿಸುವುದಿಲ್ಲ. ಭೌಗೋಳಿಕ ರಾಜಕೀಯ ಏರಿಳಿತಗಳಿಂದ ತುಂಬಿರುವ ಇಂದಿನ ಜಗತ್ತಿನಲ್ಲಿ, ನವದೆಹಲಿ ಮತ್ತು ಮಾಸ್ಕೋ ಅತ್ಯಂತ ದೊಡ್ಡ ಮತ್ತು ಸ್ಥಿರವಾದ ವಿಶ್ವಾಸಾರ್ಹ ಸಂಬಂಧವನ್ನು ಹಂಚಿಕೊಳ್ಳುತ್ತವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರ ಈ ಭೇಟಿ ಕೇವಲ ರಾಜತಾಂತ್ರಿಕವಾಗಿ ಮಾತ್ರವಲ್ಲದೆ, ವಾಣಿಜ್ಯಿಕವಾಗಿಯೂ ಮಹತ್ವ ಪಡೆದುಕೊಂಡಿದೆ. ಪುಟಿನ್ ಅವರು ಭಾರತಕ್ಕೆ ತಡೆರಹಿತವಾಗಿ ಅಥವಾ ನಾನ್‌ಸ್ಟಾಪ್ ಆಗಿ ಕಚ್ಚಾ ತೈಲ ಪೂರೈಕೆ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ. ಇಂಧನ ವಲಯದಲ್ಲಿ ರಷ್ಯಾ ಮತ್ತು ಭಾರತದ ಈ ಬಾಂಧವ್ಯ ಅಮೆರಿಕದ ಆತಂಕವನ್ನು ಹೆಚ್ಚಿಸಿದೆ. ರಕ್ಷಣಾ ವಲಯ ಮತ್ತು ವ್ಯಾಪಾರದಲ್ಲಿ ಉಭಯ ದೇಶಗಳು ಹಾಕಿಕೊಂಡಿರುವ ಹೊಸ ಹೆಜ್ಜೆಗಳು ಅಮೆರಿಕದ ನಿದ್ದೆಗೆಡಿಸಿರುವುದಂತೂ ಸತ್ಯ. ಇದೇ ವೇಳೆ ಅಮೆರಿಕದೊಂದಿಗಿನ ಸಂಬಂಧದ ಬಗ್ಗೆಯೂ ಸ್ಪಷ್ಟನೆ ನೀಡಿರುವ ಜೈಶಂಕರ್, ಅಮೆರಿಕದೊಂದಿಗೆ ನಮಗೆ ಯಾವುದೇ ಸಂವಹನದ ಕೊರತೆಯಿಲ್ಲ. ಪ್ರತಿಯೊಂದು ದೇಶದೊಂದಿಗೂ ಭಾರತ ಪ್ರತ್ಯೇಕವಾದ ಮತ್ತು ಸ್ವತಂತ್ರವಾದ ರಾಜತಾಂತ್ರಿಕತೆಯನ್ನು ಅನುಸರಿಸುತ್ತದೆ. ಈ ವಿಷಯ ಅಮೆರಿಕ ಮತ್ತು ರಷ್ಯಾ ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೂ ತಿಳಿದಿದೆ ಎಂದು ಹೇಳುವ ಮೂಲಕ, ಭಾರತವು ಯಾರ ಒತ್ತಡಕ್ಕೂ ಮಣಿಯದ ಸ್ವತಂತ್ರ ರಾಷ್ಟ್ರ ಎಂಬುದನ್ನು ಪುನರುಚ್ಚರಿಸಿದ್ದಾರೆ.

Category
ಕರಾವಳಿ ತರಂಗಿಣಿ