ಕೊಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಾಬ್ರಿ ಮಾದರಿಯ ಮಸೀದಿ ನಿರ್ಮಿಸುವೆ ಎಂದು ಘೋಷಿಸಿದ್ದಕ್ಕಾಗಿ ಟಿಎಂಸಿಯಿಂದ ಅಮಾನತುಗೊಂಡ ಶಾಸಕ ಹುಮಾಯೂನ್ ಕಬೀರ್, ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆಲ್ಲಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದ್ದಾರೆ. 'ಸಿನಿಮಾ ಇನ್ನೂ ಬಾಕಿಯಿದೆ' ಎಂದು ಎಚ್ಚರಿಸಿದ ಕಬೀರ್, 'ಟಿಎಂಸಿಯ ಮುಸ್ಲಿಂ ಮತ ಬ್ಯಾಂಕ್ ಛಿದ್ರಗೊಳ್ಳಲಿದೆ' ಎಂದರು. ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಕಬೀರ್, ರಾಜ್ಯದ 294 ವಿಧಾನಸಭೆ ಸ್ಥಾನಗಳ ಪೈಕಿ 135 ಸ್ಥಾನಗಳಲ್ಲಿ ಅಭ್ಯರ್ಥಿ ನಿಲ್ಲಿಸಿವೆ ಎಂದ ಅವರು, 'ತಮ್ಮ ನಡೆಯು ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಲಿದೆ. ಮುಸ್ಲಿಮರಿಗಾಗಿ ಕೆಲಸ ಮಾಡುವ ತಮ್ಮ ಪಕ್ಷವು, ಟಿಎಂಸಿ ಮತ್ತು ಬಂಗಾಳದಲ್ಲಿ ಮೊದಲ ಬಾರಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗಳೆರಡನ್ನೂ ಸೋಲಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.