ನವದೆಹಲಿ : ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ನಡೆದ 3 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶ ಸೇರಿ 5 ಕಡೆಯ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಒಟ್ಟಾರೆ 13.36 ಕೋಟಿ ಮತದಾರರಲ್ಲಿ 1 ಕೋಟಿ ಮತದಾರರ ಹೆಸರನ್ನು ಅಳಿಸಲಾಗಿದೆ. 12.32 ಕೋಟಿ ಮತದಾರರು ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ.ಸಾವು, ವಲಸೆ, ಅಕ್ರಮ, ಪುನರಾವರ್ತಿತ ಹೆಸರು, ಅರ್ಜಿ ಸಲ್ಲಿಸದೇ ಇರುವುದು- ಅನೇಕರ ಹೆಸರು ಅಳಿಸಲು ಕಾರಣ. ಪಶ್ಚಿಮ ಬಂಗಾಳದಲ್ಲಿ, ಅಕ್ಟೋಬರ್ 27 ರ ವೇಳೆಗೆ 7.66 ಕೋಟಿ ಮತದಾರರಲ್ಲಿ, 7.08 ಕೋಟಿ ಮತದಾರರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ, ಇದು 58 ಲಕ್ಷ ಮತದಾರರ ಹೆಸರು ಕೈಬಿಡಲಾಗಿದೆ. ರಾಜಸ್ಥಾನದಲ್ಲಿ 5.48 ಕೋಟಿ ಮತದಾರರಲ್ಲಿ, 5.04 ಕೋಟಿ ಜನರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು 44 ಲಕ್ಷ ಹೆಸರು ಅಳಿಸಲಾಗಿದೆ.ಗೋವಾದಲ್ಲಿ, 11.85 ಲಕ್ಷ ಮತದಾರರಲ್ಲಿ, 10.84 ಜನರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 1.01 ಲಕ್ಷ ಜನರ ಹೆಸರು ಅಳಿಸಲಾಗಿದೆ. ಪುದುಚೇರಿಯಲ್ಲಿ, 10.21 ಲಕ್ಷ ಮತದಾರರಲ್ಲಿ, 9.18 ಲಕ್ಷ ಜನರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 1.03 ಲಕ್ಷ ಮತದಾರರನ್ನು ಕಡಿತ ಮಾಡಲಾಗಿದೆ.
ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ 58,000 ಮತದಾರರ ಪೈಕಿ 56,384 ಮತದಾರರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸುಮಾರು 1600 ಮತದಾರರ ಹೆಸರು ಕೈಬಿಡಲಾಗಿದೆ. ಹಾಗಂತ ಹೆಸರು ಸಂಪೂರ್ಣ ರದ್ದಾಗಿಲ್ಲ. ಮುಂದಿನ ವರ್ಷ ಫೆಬ್ರವರಿಯಲ್ಲಿ ಅಂತಿಮ ಪಟ್ಟಿ ಪ್ರಕಟವಾಗುವ ಮೊದಲು ಆಯಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಹೆಸರು ರದ್ದಾದವರು ಸೂಕ್ತ ದಾಖಲೆ ನೀಡಿ ಅರ್ಜಿ ಸಲ್ಲಿಸಿದರೆ ಹೆಸರು ಸೇರಿಸಲಾಗುತ್ತದೆ ಎಂದು ಆಯೋಗ ಹೇಳಿದೆ.