image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಕ್ರಿಶ್ಚಿಯನ್‌ಗೆ ಮತಾಂತರವಾದವರು ಹಾಗೂ ಮೂಲ ಆದಿವಾಸಿಗಳ ಮಧ್ಯೆ ಘರ್ಷಣೆ

ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಕ್ರಿಶ್ಚಿಯನ್‌ಗೆ ಮತಾಂತರವಾದವರು ಹಾಗೂ ಮೂಲ ಆದಿವಾಸಿಗಳ ಮಧ್ಯೆ ಘರ್ಷಣೆ

ಭೋಪಾಲ್: ಕ್ರೈಸ್ತ ಸಮುದಾಯಕ್ಕೆ ಮತಾಂತರವಾದವರು ಹಾಗೂ ಮೂಲ ಆದಿವಾಸಿಗಳ ಮಧ್ಯೆ ಅಂತ್ಯಸಂಸ್ಕಾರದ ವಿಚಾರಕ್ಕೆ ಗಲಾಟೆಯೊಂದು ಭುಗಿಲೆದ್ದು ಹಿಂಸೆಗೆ ತಿರುಗಿದಂತಹ ಘಟನೆ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ. ಎರಡು ಗುಂಪುಗಳ ನಡುವಿನ ಹಿಂಸಾಚಾರದಲ್ಲಿ ಪೊಲೀಸರು ಪತ್ರಕರ್ತರು ಸೇರಿದಂತೆ ಹಲವರು ಗಾಯಗೊಂಡಿದ್ದು, ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವೇಳೆ ಆದಿವಾಸಿ ಬುಡಕಟ್ಟು ಸಮುದಾಯದ ಜನರು ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡ ಗುಂಪಿನ ಮಧ್ಯೆ ಈ ಗಲಾಟೆ ನಡೆದಿದೆ. ಗಲಾಟೆಯ ಹಿನ್ನೆಲೆ ಕಾಂಕೇರ್‌ನ ಅಮಾಬೇಡಾದ ಬಡೆ ತೆವ್ಡಾ ಗ್ರಾಮದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಗ್ರಾಮದ ಸರಪಂಚ್ ರಾಜ್ಮಾನ್ ಸಲಾಂ ಅವರ ತಂದೆ ಚಮ್ರಾ ರಾಮ್ ಸಾವಿಗೀಡಾಗಿದ್ದು ಅವರ ಸಮಾಧಿ ನಿರ್ಮಾಣಕ್ಕೆ ಬುಡಕಟ್ಟು ಸಮುದಾಯದ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಹಿಂಸಾಚಾರ ಭುಗಿಲೆದ್ದಿದೆ. ಚಮ್ರಾ ರಾಮ್ ಅವರ ಕುಟುಂಬವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಇದೇ ಕಾರಣಕ್ಕೆ ಅವರ ಸಮಾಧಿ ವಿಚಾರಕ್ಕೆ ಬುಡಕಟ್ಟು ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ನಂತರ ಇದು ಶೀಘ್ರದಲ್ಲೇ ಹಿಂಸೆಗೆ ತಿರುಗಿದೆ.

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಕೋಲುಗಳಿಂದ ಶಸ್ತ್ರಸಜ್ಜಿತವಾಗಿದ್ದ ಆದಿವಾಸಿ ಬುಡಕಟ್ಟು ಸಮುದಾಯದ ಜನರು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡ ಸಮುದಾಯದ ಸದಸ್ಯರನ್ನು ಬೆನ್ನಟ್ಟಿದ್ದಾರೆ. ಇದಕ್ಕೆ ಪ್ರತೀಕಾರವಾಗಿ, ಕ್ರಿಶ್ಚಿಯನ್ನರು ಬುಡಕಟ್ಟು ಜನಾಂಗದವರನ್ನು ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ. ಇದರಿಂದ ಪರಿಸ್ಥಿತಿ ನಂತರ ತೀವ್ರ ವಿಕೋಪಕ್ಕೆ ಹೋಗಿದ್ದು, ಗ್ರಾಮದ ಸರಪಂಚ್ ಮನೆಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿ ನಂತರ ಗ್ರಾಮದಲ್ಲಿದ್ದ ಚರ್ಚ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಹಿಂಸಾಚಾರ ಅಲ್ಲಿಗೆ ನಿಲ್ಲಲಿಲ್ಲ. 3000 ಕ್ಕೂ ಹೆಚ್ಚು ಜನರ ಗುಂಪೊಂದು ಅಮಾಬೇಡಾಗೆ ಮೆರವಣಿಗೆ ನಡೆಸಿ ಅಲ್ಲಿ ಮತ್ತೊಂದು ಚರ್ಚ್‌ಗೆ ಬೆಂಕಿ ಹಚ್ಚಿದ್ದಾರೆ. ನಂತರ ಈ ಆದಿವಾಸಿ ಜನರ ಗುಂಪು ಮೂರನೇ ಚರ್ಚ್ ಕಡೆಗೆ ಚಲಿಸಲು ಪ್ರಾರಂಭಿಸಿದೆ. ಇದನ್ನರಿತ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಭಾರಿ ಪೊಲೀಸರ ನಿಯೋಜನೆಯ ನಂತರವೂ ಘರ್ಷಣೆಗಳು ಮುಂದುವರಿದಂತೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಘಟನೆಯಲ್ಲಿ ಈ ಹಿಂಸಾಚಾರದ ಬಗ್ಗೆ ವರದಿ ಮಾಡ್ತಿದ್ದ ಹಲವು ಪತ್ರಕರ್ತರು ಹಾಗೂ ಗ್ರಾಮಸ್ಥರು ಕೂಡ ಗಾಯಗೊಂಡಿದ್ದಾರೆ.

Category
ಕರಾವಳಿ ತರಂಗಿಣಿ