ನವದೆಹಲಿ : ಕೇವಲ 18 ಶೇಕಡಾ ಸುಂಕ ಕಡಿತವಲ್ಲ, ಹಲವು ಭಾರತೀಯ ಉತ್ಪನ್ನಗಳಿಗೆ ಶೂನ್ಯ ಶೇಕಡಾ ಟ್ಯಾರೀಫ್ ಸಿಕ್ಕಿರುವುದೇ ಭಾರತದ ಅತಿದೊಡ್ಡ ಗೆಲುವು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಈ ಹೊಸ ಐತಿಹಾಸಿಕ ಮಧ್ಯಂತರ ವ್ಯಾಪಾರ ಒಪ್ಪಂದ ಭಾರತೀಯ ರಫ್ತುದಾರರಿಗೆ ಮಾತ್ರವಲ್ಲ, ಒಟ್ಟಾರೆ ಆರ್ಥಿಕತೆಗೆ ದೊಡ್ಡ ಬಲ ನೀಡಿದೆ ಎನ್ನುವುದು ಸ್ಪಷ್ಟವಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಈ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಅಮೆರಿಕವು ಈ ಹಿಂದೆ ಭಾರತೀಯ ಉತ್ಪನ್ನಗಳ ಮೇಲೆ ವಿಧಿಸಿದ್ದ ಸುಮಾರು 50 ಶೇಕಡಾ ವರೆಗಿನ ಸುಂಕವನ್ನು ಈಗ 18 ಶೇಕಡಾಕ್ಕೆ ಇಳಿಸಿದೆ. ಇದರಲ್ಲಿ ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತಕ್ಕೆ ವಿಧಿಸಲಾಗಿದ್ದ 25 ಶೇಕಡಾ ಹೆಚ್ಚುವರಿ ದಂಡನಾತ್ಮಕ ಸುಂಕವೂ ಸೇರಿತ್ತು. ಈ ಕಡಿತದಿಂದ ಭಾರತೀಯ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಲಿವೆ. ಆದರೆ ಈ ಡೀಲ್ನ ನಿಜವಾದ ಹೈಲೈಟ್ ಎಂದರೆ, ಶೂನ್ಯ ಸುಂಕ (0% Tariff) ಸೌಲಭ್ಯ. ಗೋಯಲ್ ಅವರ ಪ್ರಕಾರ, ಹಲವು ಆಯ್ದ ಭಾರತೀಯ ಉತ್ಪನ್ನಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಸಂಪೂರ್ಣ ಸುಂಕ ಮುಕ್ತ ಪ್ರವೇಶ ದೊರಕಿದೆ. ಕೃಷಿ ಕ್ಷೇತ್ರದಲ್ಲಿ ಭಾರತೀಯ ಮಸಾಲೆಗಳು, ಚಹಾ, ಕಾಫಿ, ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆ, ಅಡಿಕೆ, ಗೋಡಂಬಿ, ಚೆಸ್ಟ್ನಟ್, ವಿವಿಧ ತರಕಾರಿಗಳು ಹಾಗೂ ಹಣ್ಣುಗಳಾದ ಮಾವು, ಬಾಳೆಹಣ್ಣು, ಕಿವಿ, ಅನಾನಸ್, ಅಣಬೆಗಳು, ಸಂಸ್ಕರಿಸಿದ ಹಣ್ಣುಗಳು ಮತ್ತು ಅನಾನಸ್ ಜಾಮ್ ಸೇರಿ ಇನ್ನಿತರ ಉತ್ಪನ್ನಗಳ ಮೇಲೆ ಈಗ ಶೂನ್ಯ ಸುಂಕದಡಿ ಅಮೆರಿಕಕ್ಕೆ ರಫ್ತು ಆಗಲಿವೆ.
ಇದಷ್ಟೇ ಅಲ್ಲದೆ, ಔಷಧ ಕ್ಷೇತ್ರದಲ್ಲೂ ಭಾರತಕ್ಕೆ ದೊಡ್ಡ ಲಾಭ ಸಿಕ್ಕಿದೆ. ಜೆನೆರಿಕ್ ಔಷಧಗಳು, ರತ್ನ ಮತ್ತು ವಜ್ರಗಳು, ಸ್ಮಾರ್ಟ್ಫೋನ್ಗಳು ಹಾಗೂ ವಿಮಾನದ ಬಿಡಿಭಾಗಗಳು ಕೂಡ 0% ಟ್ಯಾರೀಫ್ ವ್ಯಾಪ್ತಿಗೆ ಬಂದಿವೆ. ಇದರಿಂದ ಭಾರತದ ಫಾರ್ಮಾ, ಜ್ಯುವೆಲ್ಲರಿ ಮತ್ತು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಿಗೆ ಹೊಸ ಬಾಗಿಲು ತೆರೆದಂತಾಗಿದೆ. ಈ ಒಪ್ಪಂದದಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ರೈತರಿಗೆ ನೀಡಿರುವ ರಕ್ಷಣೆ. ಭಾರತ ತನ್ನ ಸೂಕ್ಷ್ಮ ಕೃಷಿ ಕ್ಷೇತ್ರಗಳಾದ ಡೈರಿ ಉತ್ಪನ್ನಗಳು (ಹಾಲು, ತುಪ್ಪ), ಅಕ್ಕಿ, ಗೋಧಿ ಮತ್ತು ಸಕ್ಕರೆ ಮಾರುಕಟ್ಟೆಯನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟಿಲ್ಲ. ಈ ಉತ್ಪನ್ನಗಳ ಮೇಲೆ ಯಾವುದೇ ಸುಂಕ ವಿನಾಯಿತಿ ನೀಡದ ಮೂಲಕ, ದೇಶೀಯ ರೈತರ ಹಿತಾಸಕ್ತಿಯನ್ನು ಕಾಪಾಡಲಾಗಿದೆ. ಭಾರತವೂ ಪ್ರತಿಯಾಗಿ ಕೆಲವು ಭರವಸೆಗಳನ್ನು ನೀಡಿದೆ. ಅಮೆರಿಕದ ಕೈಗಾರಿಕಾ ಉತ್ಪನ್ನಗಳು ಮತ್ತು ಆಯ್ದ ಕೃಷಿ ಉತ್ಪನ್ನಗಳಾದ ಮದ್ಯ, ವೈನ್, ಬಾದಾಮಿ ಮತ್ತು ಪಿಸ್ತಾ ಮೇಲಿನ ಸುಂಕವನ್ನು ಭಾರತ ಕಡಿಮೆ ಮಾಡಲಿದೆ. ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ತಂತ್ರಜ್ಞಾನ, ಇಂಧನ ಮತ್ತು ವಿಮಾನಗಳನ್ನು ಖರೀದಿಸುವ ಉದ್ದೇಶವನ್ನೂ ಭಾರತ ಪ್ರಕಟಿಸಿದೆ.