ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ನು ಸಾದನೆಯ ಮೆಟ್ಟಿಲನ್ನು ಮೆಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಎಷ್ಟೇ ಕಷ್ಟ ಬಂದರೂ ತನ್ನ ಸಾಧನೆಯ ಗುರಿಯನ್ನು ತಲುಪಿ ಉಳಿದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಅಂತಹ ಹೆಣ್ಣು ಮಕ್ಕಳಲ್ಲಿ ಕರಾವಳಿ ತರಂಗಿಣಿಯ ಇಂದಿನ ಅತಿಥಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಕರ್ಣಂ ಮಲ್ಲೇಶ್ವರಿ. ಇವರು 1 ಜೂನ್ 1975ರಲ್ಲಿ ಆಂಧ್ರಪ್ರದೇಶದ ಕುಗ್ರಾಮವಾದ ಅಮದಾಲ ವಲಸ ಬಳಿಯ ವೂಸವಾನಿಪೇಟಾದಲ್ಲಿ ಕರ್ಣಂ ಕುಟುಂಬದಲ್ಲಿ ಜನಿಸಿದರು. ಇವರಿಗೆ ನಾಲ್ಕು ಸಹೋದರಿಯರಿದ್ದಾರೆ. ಮಲ್ಲೇಶ್ವರಿ ಅವರು 12 ನೇ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತರಬೇತುದಾರ ನೀಲಂಶೆಟ್ಟಿ ಅಪ್ಪಣ್ಣ ಅವರಲ್ಲಿ ತರಬೇತಿ ಪಡೆದರು. ಸಹೋದರಿ ಮದುವೆಯಾಗಿ ದೆಹಲಿಯಲ್ಲಿ ವಾಸಿಸುತ್ತಿದ್ದರಿಂದ ಮಲ್ಲೇಶ್ವರಿ ಅವರು ಉತ್ತಮ ತರಬೇತಿಗಾಗಿ ದೆಹಲಿ ನಗರಕ್ಕೆ ತೆರಳಿದರು. ಅಲ್ಲಿ ಇವರಿಗೆ ಉತ್ತಮ ಕ್ರೀಡಾಪಟುವಾಗಲು ಸಾಮರ್ಥ್ಯವಿದೆ ಎಂದು ಸ್ಪಷ್ಟವಾಯಿತು. ಆಕೆಯ ಪ್ರತಿಭೆಯನ್ನು ಶೀಘ್ರದಲ್ಲೇ ಭಾರತೀಯ ಕ್ರೀಡಾ ಪ್ರಾಧಿಕಾರ ಗುರುತಿಸಿತು. 1990 ರಲ್ಲಿ ಮಲ್ಲೇಶ್ವರಿಯವರನ್ನು ರಾಷ್ಟ್ರೀಯ ಶಿಬಿರಕ್ಕೆ ಸೇರಿಕೊಂಡರು. ನಾಲ್ಕು ವರ್ಷಗಳ ನಂತರ, ಅವರು 54-ಕೆಜಿ ತರಗತಿಯಲ್ಲಿ ವೇಟ್-ಲಿಫ್ಟಿಂಗ್ ವಿಶ್ವ ಚಾಂಪಿಯನ್‌ಶಿಪ್ ವಿಜೇತರಾದರು. ಮಲ್ಲೇಶ್ವರಿ 1994 ಮತ್ತು 1995 ರಲ್ಲಿ 54 ಕೆಜಿ ವಿಭಾಗದಲ್ಲಿ ವಿಶ್ವ ಪ್ರಶಸ್ತಿಯನ್ನು ಗೆದ್ದರು. 1993 ಮತ್ತು 1996 ರಲ್ಲಿ ಮೂರನೇ ಸ್ಥಾನ ಪಡೆದರು. 1994 ರಲ್ಲಿ, ಅವರು ಇಸ್ತಾನ್‌ಬುಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದರು ಮತ್ತು 1995 ರಲ್ಲಿ ಅವರು 54 ಕೆ ಜಿ ವಿಭಾಗದಲ್ಲಿ ಕೊರಿಯಾದಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗಳನ್ನು ಗೆದ್ದರು. ಆ ವರ್ಷ, ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆಯ 113 ಕೆಜಿ ಎತ್ತುವ ಮೂಲಕ ಚೀನಾದಲ್ಲಿ ಪ್ರಶಸ್ತಿಯನ್ನು ಗೆದ್ದರು. ತನ್ನ ಒಲಂಪಿಕ್ ಗೆಲುವಿಗೆ ಮುಂಚೆಯೇ, ಮಲ್ಲೇಶ್ವರಿ 11 ಚಿನ್ನದ ಪದಕಗಳನ್ನು ಒಳಗೊಂಡಂತೆ 29 ಅಂತರಾಷ್ಟ್ರೀಯ ಪದಕಗಳೊಂದಿಗೆ ಎರಡು ಬಾರಿವೇಟ್ ಲಿಫ್ಟಿಂಗ್ ವಿಶ್ವ ಚಾಂಪಿಯನ್ ಆಗಿದ್ದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪದಕಗಳ ಜೊತೆಗೆ, ಮಲ್ಲೇಶ್ವರಿಗೆ 1994ರಲ್ಲಿ ಅರ್ಜುನ ಪ್ರಶಸ್ತಿ , 1999 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ, ಮತ್ತು 1999ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದರು. 2000 ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಮಲ್ಲೇಶ್ವರಿ "ಸ್ನ್ಯಾಚ್"ನಲ್ಲಿ 110 ಕೆಜಿ ಮತ್ತು "ಕ್ಲೀನ್ ಮತ್ತು ಜರ್ಕ್" ವಿಭಾಗದಲ್ಲಿ 130 ಕೆಜಿ ಒಟ್ಟು 240 ಕೆಜಿ ಎತ್ತಿ, ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. 1997ರಲ್ಲಿ, ಮಲ್ಲೇಶ್ವರಿಯವರು ತನ್ನ ಸಹ ವೇಟ್ ಲಿಫ್ಟರ್ ರಾಜೇಶ್ ತ್ಯಾಗಿ ಅವರನ್ನು ವಿವಾಹವಾದರು. 2001 ರಲ್ಲಿ, ಒಲಿಂಪಿಕ್ ಕಂಚಿನ ಪದಕವನ್ನು ಗೆದ್ದ ಒಂದು ವರ್ಷದ ನಂತರ ಅವರಿಗೆ ಗಂಡು ಮಗುವಾಯಿತು. ಅವರು 2002 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧೆಗಳಿಗೆ ಮರಳಲು ಯೋಜಿಸಿದ್ದರು. ಆದರೆ ಅವರ ತಂದೆಯ ಮರಣದ ಕಾರಣದಿಂದ ಹಿಂದೆ ಸರಿದರು. 2004ರ ಒಲಿಂಪಿಕ್ಸ್ ನಲ್ಲಿ ಗುರಿ ಮುಟ್ಟಲು ವಿಫಲವಾದ ನಂತರ ಅವರು ನಿವೃತ್ತರಾದರು. ಕರ್ಣಂ ಮಲ್ಲೇಶ್ವರಿ ಮತ್ತು ತ್ಯಾಗಿ ಪ್ರಸ್ತುತ ಹರಿಯಾಣದ ಯಮುನಾನಗರದಲ್ಲಿ ತಮ್ಮ ಮಗ ಮತ್ತು ಅತ್ತೆಯೊಂದಿಗೆ ವಾಸಿಸುತ್ತಿದ್ದು, ಅವರು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ. ಇವರಿಗೆ ಕರಾವಳಿ ತರಂಗಿಣಿ ಶುಭ ಹಾರೈಸುತ್ತಿದೆ.
✍ ಲಲಿತಶ್ರೀ ಪ್ರೀತಂ ರೈ