ಮಂಗಳೂರು: 1931 ರಲ್ಲಿ ಎಸ್. ಯು ಪಣಿಯಾಡಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡು ಜಿಲ್ಲೆ ಎಂಬ ಹೆಸರಿಡಬೇಕೆಂದು ಜಿಲ್ಲಾ ಪರಿಷತ್‌ನಲ್ಲಿ ಮಂಡಿಸಿದಾಗ ಜಿಲ್ಲೆಗೆ 'ಮಂಗಳೂರು' ಎಂದು ಹೆಸರಿಡಬೇಕೆಂಬ ಕೂಗು ಅಲ್ಲಿನ ಪರಿಷತ್ ಸದಸ್ಯರಿಂದ ಬಂದಿತ್ತು ಎಂದು ಕತ್ತಲ್ ಸಾರ್ ತಿಳಿಸಿದ್ದಾರೆ. ಅವರು ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 2000 ವರ್ಷಗಳಿಂದ ದಾಖಲಾತ್ಮಕ ಇತಿಹಾಸವಿರುವ ನಮ್ಮ ಜಿಲ್ಲೆಗೆ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆ ಹೆಸರುಗಳಿದ್ದವು. ಸಾರ್ವತ್ರಿಕವಾಗಿ ತುಳುನಾಡು ಎಂದು ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡನ್ನು ಒಳಗೊಂಡ ಭೂಭಾಗಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ನೆಲಗಟ್ಟಿನಲ್ಲಿ ಹೆಸರು ಇತ್ತು. ಸುಮಾರು 2000 ವರ್ಷಗಳ ಹಿಂದೆ ತಮಿಳಿನ ಸಂಗಂ ಸಾಹಿತ್ಯವಾದ 'ಅಗನಾನೂರು' ಎಂಬ ಕಾವ್ಯಮಾಲೆಯ 13ನೇ ಪದ್ಯದಲ್ಲಿ ತುಳುನಾಡು ಎಂಬ ಉಲ್ಲೇಖವಿರುವುದು ನಮ್ಮ ಪ್ರದೇಶದ ಪುರಾತನ ದಾಖಲೆಯಾಗಿದೆ. ಮುಂದೆ ಆಳುಪರು, ಪಲ್ಲವರು, ಹೊಯ್ಸಳರು, ವಿಜಯನಗರ, ಕೆಳದಿ ರಾಜರು ತುಳು ವಿಷಯ, ತುಳು ದೇಶ, ತುಳು ರಾಜ್ಯ ಎಂದು ನಮ್ಮ ಅವಿಭಜಿತ ಜಿಲ್ಲೆಗಳನ್ನು ಗುರುತಿಸಿರುವುದು ಇತಿಹಾಸದ ಪುಟಗಳಲ್ಲಿ ಸ್ಥಿರವಾಗಿರುವ ದಾಖಲೆ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಂಗಳೂರು ರಾಜ್ಯ, ಬಾರ್ಕೂರು ರಾಜ್ಯ ಎಂದು ಈಗಿರುವ ತುಳುನಾಡನ್ನು ವಿಭಾಗಿಸಿ ಆಡಳಿತಾತ್ಮಕವಾಗಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯನ್ನು 'ಮಂಗಳೂರು ರಾಜ್ಯ'ವನ್ನಾಗಿಸಿರುವುದು ಮಂಗಳೂರು ಎಂಬ ಹೆಸರಿಗಿರುವ ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಇಷ್ಟಲ್ಲದೆ ಅನೇಕ ವಿದೇಶಿ ವಿದ್ವಾಂಸರು ತಮ್ಮ ದಾಖಲೆಗಳಲ್ಲಿ ಮಂಗಳೂರನ್ನು ಉಲ್ಲೇಖಿಸಿರುತ್ತಾರೆ. 1931 ರಲ್ಲಿ ಎಸ್. ಯು ಪಣಿಯಾಡಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡು ಜಿಲ್ಲೆ ಎಂಬ ಹೆಸರಿಡಬೇಕೆಂದು ಜಿಲ್ಲಾ ಪರಿಷತ್‌ನಲ್ಲಿ ಮಂಡಿಸಿದಾಗ ಜಿಲ್ಲೆಗೆ 'ಮಂಗಳೂರು' ಎಂದು ಹೆಸರಿಡಬೇಕೆಂಬ ಕೂಗು ಅಲ್ಲಿನ ಪರಿಷತ್ ಸದಸ್ಯರಿಂದ ಬಂದಿತ್ತು ಎಂದು ಕತ್ತಲ್ ಸಾರ್ ತಿಳುಸಿದರು.
ನಮ್ಮ ನೆಲವನ್ನು ಆಕ್ರಮಿಸಿ ನಮ್ಮನ್ನು ದಾಸ್ಯಕ್ಕೆ ದೂಡಿ ಪರತಂತ್ರರನ್ನಾಗಿಸುವ ಹುನ್ನಾರವನ್ನು ಮಾಡಿದ ಪೋರ್ಚುಗೀಸರು ಮತ್ತು ಬ್ರಿಟಿಷರು ನೀಡಿದ ಬಳುವಳಿ ಹೆಸರೇ ಕೆನರಾ. ಮುಂದೆ ಈ ಕೆನರಾ ವಿಭಜನೆಗೊಂಡು 'ನಾರ್ತ್ ಕೆನರಾ' 'ಸೌತ್ ಕೆನರಾ' ಆಗಿ ಮುಂದೆ ಇದು ಅಪಭ್ರಂಶವಾಗಿ 'ಕನ್ನಡ'ವಾಗಿ ಬದಲಾಯಿತು. ದಾಸ್ಯದ ಸಂಕೋಲೆಯಿಂದ ನಮ್ಮ ದೇಶ ಮುಕ್ತಿ ಪಡೆದರೂ ಇನ್ನೂ ನಮ್ಮ ಅನೇಕ ನಗರಗಳು ಅರ್ಥವಿಲ್ಲದ ವಸಾಹತುಶಾಹಿಗಳ ನಿಶಾನೆ ಎಂಬಂತೆ ಅವರು ನೀಡಿದ ಹೆಸರುಗಳಿಗೆ ಒಗ್ಗಿಕೊಂಡಿರುವುದು, ಅಂತಹ ಹೆಸರಿನಲ್ಲಿ ಇನ್ನೂ ಆಡಳಿತ ನಡೆಸುತ್ತಿರುವುದಕ್ಕೆ 'ದಕ್ಷಿಣ ಕನ್ನಡ' ಸಾಕ್ಷಿ ಎಂದರು.
ಮಂಗಳೂರು ಯಾಕೆ ಬೇಕೆಂದು ಕತ್ತಲಸಾರ್ ನೀಡಿದ ಕೆಲವು ಉದಾಹರಣೆ ಏನೆಂದರೆ ವಿಜಯನಗರ ಅರಸರ ಕಾಲದಿಂದಲೂ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಗೆ ಇದ್ದ ಐತಿಹಾಸಿಕ ಹೆಸರು ಮಂಗಳೂರು ರಾಜ್ಯ. ಪ್ರಸ್ತುತ ತಾಲೂಕಿಗೆ ಸೀಮಿತವಾದ ಮಂಗಳೂರು ಹೆಸರನ್ನು ಇಡೀ ಜಿಲ್ಲೆಗೆ ಇಡಬೇಕೆಂದು ಪಕ್ಷಾತೀತವಾಗಿ ರಾಜಕಾರಣಿಗಳು ಸಾಮಾಜಿಕ ಚಿಂತಕರು ತುಳುವರು ಮತ್ತು ಧಾರ್ಮಿಕ ಮುಖಂಡರ ಬೇಡಿಕೆ. ತಾಲೂಕು ಕೇಂದ್ರದ ಹೆಸರನ್ನು ಇಡೀ ಜಿಲ್ಲೆಗೆ ಇಟ್ಟ ಸಾಕಷ್ಟು ಉದಾಹರಣೆಗಳು. ಧರ್ಮಾತೀತವಾಗಿ ಜಿಲ್ಲೆಯ ಹೊರಗೆ, ದೇಶ ವಿದೇಶಗಳಲ್ಲಿ ಇಲ್ಲಿನ ಮೂಲ ನಿವಾಸಿಗಳನ್ನು ಮಂಗಳೂರಿನವರಿಂದ ಗುರುತಿಸುತ್ತಿರುವುದು. ಮಂಗಳೂರು ನಗರದ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿ ಬ್ರಾಂಡ್ ಮಂಗಳೂರಿಗೆ ಸಹಕಾರಿ. ಜಿಲ್ಲೆಯ ಎಲ್ಲರೂ ಒಪ್ಪುವಂತಹ ಹೆಸರು ಮಂಗಳೂರು. ಈಗಾಗಲೇ ಜಿಲ್ಲೆಯ ವಿಮಾನ ನಿಲ್ದಾಣ, ಬಂದರು, ವಿಶ್ವವಿದ್ಯಾಲಯ, ರೈಲ್ವೆ ಜೋನ್‌ಗೆ ಮಂಗಳೂರು ಎಂದೇ ಹೆಸರು. ಹಲವಾರು ವರ್ಷಗಳ ಬೇಡಿಕೆ ಮತ್ತು ಸತತ ಪ್ರಯತ್ನ. Bಮಂಗಳೂರು ಬ್ರಾಂಡ್ ನಿಂದ ಮುಂದೆ ಉದ್ದಿಮೆಗಳು, ಐಟಿ ಕಂಪನಿಗಳು ಮತ್ತು ಇತರ ಯೋಜನೆಗಳಿಗೆ ಸಹಕಾರಿ. ಬೆಂಗಳೂರಿನಷ್ಟೇ ಪ್ರಖ್ಯಾತಿ ಪಡೆಯಬಲ್ಲ ಸಾಮರ್ಥ್ಯವಿರುವ ಜಿಲ್ಲೆಯಾಗಿ ಬೆಳೆಯಲು ಬ್ರಾಂಡ್ ಮಂಗಳೂರು ಸಹಕಾರಿ. ವಸಾಹತುಶಾಹಿಗಳಾದ ಬ್ರಿಟಿಷರು, ಪೋರ್ಚುಗೀಸರು ನೀಡಿದ ಹೆಸರನ್ನು ಅಳಿಸಿ ದೇಸಿಯ ಹೆಸರು ನೀಡುವುದು. ಈಗಾಗಲೇ ಮಂಗಳೂರು ತಾಲೂಕಿರುವುದರಿಂದ ಈ ಹೆಸರನ್ನು ಜಿಲ್ಲೆಗೆ ಇಡುವುದರಿಂದ ಕಾನೂನಾತ್ಮಕ ತೊಡಕು ಇಲ್ಲದಿರುವುದು. ಜಿಲ್ಲೆಯ ಸಂಸದರು ಶಾಸಕರು ವಿಧಾನ ಪರಿಷತ್ ಸದಸ್ಯರು ಮಂಗಳೂರು ಹೆಸರಿನ ಕುರಿತು ಒಲವು ತೋರಿಸಿರುವುದು ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ರಕ್ಷಿತ್ ಶಿವರಾಮ್, ಕಿರಣ್ ಕುಮಾರ್ ಕೋಡಿಕಲ್, ಬಿ ಎ ಮೊಯಿದಿನ್ ಬಾವ, ಅಕ್ಷಿತ್ ಸುವರ್ಣ, ಕಸ್ತೂರಿ ಪಂಜ, ದಿಲ್ ರಾಜ್ ಆಳ್ವಾ ಮುಂತಾದವರು ಉಪಸ್ಥಿತರಿದ್ದರು.
ಇದೆ ಸಂಧರ್ಭ ಹೆಸರು ಬದಲಾವಣೆ ಸ್ಟಿಕರ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.