image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೆಂಪುಕಲ್ಲು, ಮರಳು ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ- ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಕೆಂಪುಕಲ್ಲು, ಮರಳು ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ- ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಉಂಟಾಗಿರುವ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ಸಮಸ್ಯೆ ಬಗ್ಗೆ ಬಿಜೆಪಿ ನಿಯೋಗ  ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸಮಸ್ಯೆ ಬಗೆಹರಿಸದಿದ್ದರೆ ಇಡೀ ಜಿಲ್ಲೆಯಲ್ಲಿ ಕಾರ್ಮಿಕರನ್ನು ಸೇರಿಸಿಕೊಂಡು ಮತ್ತೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ನಗರದ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಇಡೀ ದಿನ ದ.ಕ. ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದರು. ಆದರೆ, ಕೆಂಪುಕಲ್ಲು, ಮರಳು ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡಿಲ್ಲ. ಸಿಎಂ ಸೂಚನೆಯಂತೆ ಜಿಲ್ಲೆಯ ಶಾಸಕರನ್ನು ಕರೆದು ಸಭೆ ನಡೆಸುವ ಪ್ರಯತ್ನ ಮಾಡುತ್ತಾರೆ ಅಂದುಕೊಂಡಿದ್ದೆವು. ಈ ಸಂಬಂಧ ಇದುವರೆಗೆ ಜನಪ್ರತಿನಿಧಿಗಳ ಸಭೆ ನಡೆಸಿಲ್ಲ. ಪ್ರತಿಪಕ್ಷವಾಗಿ ನಾವು ಎಲ್ಲಾ ತಾಲೂಕು ಕೇಂದ್ರದಲ್ಲಿ ಈಗಾಗಲೇ ಪ್ರತಿಭಟನೆ ಮಾಡಿದ್ದೇವೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಸಮಸ್ಯೆಯ  ಸೂಚಕವಾಗಿದೆ. ಉಸ್ತುವಾರಿ ಸಚಿವರಿಗೆ ಸಮಸ್ಯೆ ಬಗೆಹರಿಸುವ ಕಾಳಜಿ ಇಲ್ಲ. ಜಿಲ್ಲೆಯ ಕಾಂಗ್ರೆಸ್‌ನ ಶಾಸಕರು, ಕಾಂಗ್ರೆಸ್ ನಾಯಕರೂ ಸಭೆ ಬಗ್ಗೆ ಒತ್ತಾಯಿಸಿಲ್ಲ ಎಂದು   ಆರೋಪಿಸಿದರು. ಮರಳು, ಕೆಂಪುಕಲ್ಲು ಸಮಸ್ಯೆ ಬಗ್ಗೆ ಕಾರ್ಮಿಕರು, ಗುತ್ತಿಗೆದಾರರು ಪ್ರತಿಭಟನೆ ನಡೆಸಲು ಮುಂದಾದಾಗ ಪ್ರತಿಭಟನೆ ಕೈಬಿಡುವಂತೆ ಯುಟಿ ಖಾದರ್ ಮನವಿ ಮಾಡಿದ್ದರು. ಆದರೆ, ಆ ಬಳಿಕ ಅವರು ಬಳಿಕ ವಿದೇಶಕ್ಕೆ ಹೋಗಿ ಕುಳಿತಿದ್ದಾರೆ. ಜಿಲ್ಲೆಯಲ್ಲಿ ಸ್ಪೀಕರ್ ಅವರೇ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆಯೇ ಎಂಬುದು ನಮಗೆ ಗೊತ್ತಿಲ್ಲ. ಕಾಂಗ್ರೆಸ್ ಸರಕಾರ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುತ್ತಿದೆ. ಸಮಸ್ಯೆ ಬಗ್ಗೆ ಜಿಲ್ಲಾಡಳಿತವೂ ಸುಮ್ಮನೆ ಕುಳಿತಿದೆ. ಮಾತು ಮಾತಿಗೆ ಸಿಮೆಂಟ್ ಬ್ಲಾಕ್‌ನಲ್ಲಿ ಮನೆ ಕಟ್ಟಬಹುದು ಎಂದು ಜಿಲ್ಲಾಡಳಿತ ಹೇಳುತ್ತಿದೆ. ಪ್ರಾಯೋಗಿಕವಾಗಿ ಅದು ಸಾಧ್ಯವಿಲ್ಲ. ಈ ಸಮಸ್ಯೆಯಿಂದ ಕಾರ್ಮಿಕರು ಆತಂಕದಲ್ಲಿದ್ದು ಖಿನ್ನತೆಗೆ ಒಳಗಾಗಿದ್ದಾರೆ. ಅಕ್ರಮ ದಂಧೆ ನಿಲ್ಲಬೇಕು. ಆದರೆ, ಕಟ್ಟುನಿಟ್ಟಿನ ಕ್ರಮದ ಹೆಸರಿನಲ್ಲಿ ಜನಸಾಮಾನ್ಯರ ಬದುಕಿಗೆ ತೊಂದರೆ ಆಗಬಾರದು. ಕಾನೂನು ಮೂಲಕವೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ವಿಚಾರದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು  ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಕೇಂದ್ರ ಸರಕಾರ ಮರಳಿನ ವಿಚಾರದಲ್ಲಿ ನಿಯಮ ಸಡಿಲಿಕೆಯ ಕುರಿತು ಪತ್ರ ಬರೆಯಲು ರಾಜ್ಯಕ್ಕೆ ಸೂಚಿಸಿತ್ತು. ಆದರೆ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಪತ್ರ ಬರೆದಿಲ್ಲ. ಮುಂದೆ ಪತ್ರ ಕಳುಹಿಸಿದರೆ ಕರಾವಳಿಯ ಮೂರು ಜಿಲ್ಲೆಯ ಸಂಸದರು ಕೇಂದ್ರದಿಂದ ಕ್ಲಿಯೆರೆನ್ಸ್ ಮಾಡಿಸಿಕೊಳ್ಳುವ ಕೆಲಸ ಮಾಡುತ್ತಾರೆ. ಜಿಲ್ಲೆಗೆ ಸಂಬಂಧಿಸಿ ತ್ವರಿತ ಗತಿಯಲ್ಲಿ ನಿಯಮ ರೂಪಿಸಿ, ಸರಳವಾಗಿ ಕೆಂಪುಕಲ್ಲು, ಮರಳು ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್‌, ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ ಕಿಶೋರ್ ಕುಮಾ‌ರ್ ಪುತ್ತೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ