ಮಂಗಳೂರು: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಹಣ ಬಳಕೆ ಮಾಡಲಾಗಿದೆ ಎಂಬ ಅನುಮಾನವಿದೆ. ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯ ಸಂಚಾಲಕ ವಸಂತ ಗಿಳಿಯಾರ್ ಆಗ್ರಹಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸುಕುಧಾರಿ ಯಾರ ಮೇಲೆ ಆರೋಪ ಮಾಡಿದ್ದಾನೆ ಎಂದು ಇನ್ನೂ ದೃಢಪಟ್ಟಿಲ್ಲ. ಹೀಗಿರುವಾಗ ಯಾವುದೇ ಸುದ್ದಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳು, ಶ್ರೀ ಮಂಜುನಾಥ ಸ್ವಾಮಿಗಳ ಫೋಟೊ ಬಳಕೆ ತಪ್ಪು. ಅನಾಮಿಕ ಹೇಳಿರುವ ಹಾಗೆ ಅಸ್ಥಿ ದೊರೆತಿಲ್ಲ. ಆದರೆ ಕೆಲವು ಯೂಟ್ಯೂಬ್ ಚಾನೆಲ್ ಗಳಲ್ಲಿ ಹಲವು ಶವಗಳು ಸಿಕ್ಕಿವೆ, ಅದರಲ್ಲಿ ಹೆಣ್ಣು ಮಕ್ಕಳದು ಇದೆ ಎನ್ನುವ ಸುದ್ದಿಗಳನ್ನು ಬಿತರಿಸುತ್ತಿದ್ದಾರೆ ಇದರಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದೆ ಆಕ್ರೋಶ ಉಂಟಾಗಿದೆ. ಯಾವುದೇ ಮಾಧ್ಯಮವಿರಲಿ ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸುವ ಕೆಲಸ ಮಾಡಬಾರದು ಇದರಿಂದ ಸಮಾಜದ ಶಾಂತಿಗೆ ಧಕ್ಕೆ ಉಂಟಾಗುತ್ತದೆ. ಒಂದೊಮ್ಮೆ ಅವರು ಬಿತ್ತರಿಸುತ್ತಿರುವ ಸುದ್ದಿ ಸುದ್ದಿ ಸತ್ಯವೇ ಆಗಿದ್ದರೆ ಅದನ್ನು ಸ್ಪಷ್ಟಪಡಿಸಲಿ. ಅದು ಸತ್ಯವಲ್ಲ ಎಂದಾದರೆ ತಕ್ಷಣವೇ ಅಂತಹ ಯುಟ್ಯೂಬ್ ಚಾನೆಲ್ ಗಳ ಹಾಗೂ ಅದರ ಮಾಲೀಕರು ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಅವರು ವಿನಂತಿಸಿದರು.
ಇದರೊಂದಿಗೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ಹೀಗಾಗಿ ಇದೇ ತಿಂಗಳು ಧರ್ಮಸ್ಥಳ ಕ್ಷೇತ್ರದಲ್ಲಿ ಧರ್ಮಜಾಗರಣಾ ಸಮಾವೇಶ ನಡೆಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೊತ್ತಾಡಿ ಶರತ್ ಶೆಟ್ಟಿ, ನಿಖಿಲ್ ನಾಯಕ್ ತೆಕ್ಕಟ್ಟೆ, ಮಹೇಶ್ ಬೈಲೂರು, ರವೀಂದ್ರ ಹೇರೂರು, ಪ್ರವೀಣ್ ಯಕ್ಷಿಮಠ, ರವಿಚಂದ್ರ ಮೊದಲಾದವರು ಉಪಸ್ಥಿತರಿದ್ದರು.