ಬೆಂಗಳೂರು: "ಚುನಾವಣೆಗಳಲ್ಲಿ ಏನು ತಪ್ಪಾಗಿದೆ ಎಂದು ರಾಜಕೀಯ ನಾಯಕರಾದ ನಾವುಗಳು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಅವರೇ ಈ ತಪ್ಪುಗಳನ್ನು ಬಗೆಹರಿಸಬೇಕು ಹಾಗೂ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಈ ಕೆಲಸ ಮಾಡುವುದು ನಾವಲ್ಲ. ಅವರು ನೀಡಿರುವ ನೋಟಿಸ್ ಗೆ ನಾವು ಹೆದರುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿ,"ನಾವು ತಪ್ಪು ಹೇಳಿದ್ದರೆ ನಮ್ಮ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಲಿ. ಚುನಾವಣಾ ಪ್ರಕ್ರಿಯೆಯಲ್ಲಿ ಏನೇನು ತಪ್ಪು ನಡೆದಿದೆ ಎಂದು ನಾವು ತಿಳಿಸಿದ್ದೇವೆ. ಇನ್ನೊಂದು ದೊಡ್ಡ ಅವಕಾಶ ನನಗಿದೆ. ಆದರೆ ಆ ವಿಚಾರವನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ. ದಾಖಲೆಗಳನ್ನು ಪಡೆಯುವ ಜವಾಬ್ದಾರಿ ಅವರದ್ದು. ನಾವು ತಪ್ಪು ನಡೆದಿದೆ ಎಂದು ತಿಳಿಸಿದ್ದೇವೆ. ನಾವೇನು ಶಾಲಾಮಕ್ಕಳಲ್ಲ” ಎಂದು ಹೇಳಿದರು.
"ರಾಹುಲ್ ಗಾಂಧಿ ಅವರು ಇಡೀ ದೇಶಕ್ಕೆ ಎಲ್ಲಾ ಮಾಹಿತಿ ನೀಡಿದ್ದಾರೆ. ನಾವು ಕರ್ನಾಟಕದ ಚುನಾವಣಾ ಆಯೋಗದ ಆಯುಕ್ತರನ್ನು ಭೇಟಿ ಮಾಡಿದ ವೇಳೆಯಲ್ಲಿ ಅವರು ರಾಹುಲ್ ಗಾಂಧಿ ಅವರು ಮಾಡಿದ ಆರೋಪಗಳ ಮೇಲೆ ತನಿಖೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ನಾವು ಸಹ ಒಂದಷ್ಟು ಮಾಹಿತಿಗಳನ್ನು ಕೇಳಿದ್ದೇವೆ' ಎಂದು ಹೇಳಿದರು.
"ರಾಹುಲ್ ಗಾಂಧಿ ಅವರು ದೇಶದ ಪ್ರಜಾಪ್ರಭುತ್ವ ಉಳಿಸಲು, ಎಲ್ಲರಿಗೂ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತಿದ್ದಾರೆ. ಒಂದು ಮತವೂ ಸಹ ದುರುಪಯೋಗವಾಗಬಾರದು ಜೊತೆಗೆ ಯಾವುದೇ ರಾಜಕೀಯ ಪಕ್ಷಗಳು ಅಕ್ರಮ ಮಾಡಿಕೊಳ್ಳಬಾರದು ಎಂದು ಈ ಹೋರಾಟ ಮಾಡಿದ್ದಾರೆ" ಎಂದರು.