image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತ-ಚೀನಾ ನಡುವೆ ನೇರ ವಿಮಾನಯಾನ ಪುನಾರಂಭಕ್ಕೆ ಸಹಮತ

ಭಾರತ-ಚೀನಾ ನಡುವೆ ನೇರ ವಿಮಾನಯಾನ ಪುನಾರಂಭಕ್ಕೆ ಸಹಮತ

ಟಿಯಾಂಜಿನ್: ಭಾನುವಾರ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ಅಲ್ಲದೆ, ಈ ಮಾತುಕತೆ ಸಂದರ್ಭದಲ್ಲಿ, ಪರಸ್ಪರ ಗಡಿಗಳಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಜೊತೆಗೆ, ಎರಡೂ ದೇಶಗಳ ನಡುವೆ ನೇರ ವಿಮಾನಯಾನ ಆರಂಭಿಸಲು ಉಭಯ ನಾಯಕರು ಸಹಮತಿಸಿದ್ದಾರೆ. ಚೀನಾ ಅಧ್ಯಕ್ಷರೊಂದಿಗಿನ ನಿಯೋಗ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ತಮ್ಮ ಆರಂಭಿಕ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು, "ನಾವು ಕಜಾನ್‌ನಲ್ಲಿ ಮಹತ್ವದ ಸಭೆ ನಡೆಸಿದ್ದೇವೆ. ನಮ್ಮ ಸಂಬಂಧವು ಸಕಾರಾತ್ಮಕ ದಿಕ್ಕನ್ನು ಪಡೆದಿದೆ. ಗಡಿಗಳಲ್ಲಿ ಶಾಂತಿ ಮತ್ತು ಸ್ಥಿರತೆ ಇದೆ. ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭಗೊಂಡಿದೆ. ಎರಡೂ ದೇಶಗಳ ನಡುವೆ ನೇರ ವಿಮಾನಯಾನಗಳು ಸಹ ಪ್ರಾರಂಭವಾಗುತ್ತಿವೆ'' ಎಂದು ಹೇಳಿದರು. 

''2.8 ಶತಕೋಟಿ ಜನರ ಹಿತಾಸಕ್ತಿಗಾಗಿ ಉಭಯ ರಾಷ್ಟ್ರಗಳ ನಡುವೆ ಸಹಕಾರ ಮುಖ್ಯವಾಗಿದೆ. ಇದು ಮಾನವೀಯತೆಗೂ ಸಹ ಪ್ರಮುಖ ಅವಶ್ಯಕತೆಯಾಗಿದೆ. ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯಲು ಎರಡೂ ದೇಶಗಳು ಬದ್ಧವಾಗಿವೆ'' ಎಂದು ಮೋದಿ ತಿಳಿಸಿದರು. "SCOನ ಯಶಸ್ವಿ ಮುಂದಾಳತ್ವಕ್ಕಾಗಿ ನಾನು ಚೀನಾಕ್ಕೆ ಅಭಿನಂದಿಸುತ್ತೇನೆ. ಇಲ್ಲಿಗೆ ಭೇಟಿ ನೀಡಲು ಆಹ್ವಾನ ನೀಡಿದ್ದಕ್ಕೆ ಹಾಗೂ ಇಂದು ನಮ್ಮ ಸಭೆ ನಡೆಸಿರುವುದಕ್ಕೆ ನಿಮಗೆ ನನ್ನ ಧನ್ಯವಾದಗಳು" ಎಂದು ಪ್ರಧಾನಿ ಹೇಳಿದರು. ಉಭಯ ನಾಯಕರ ನಡುವಿನ ಸಭೆಯು ಸುಮಾರು 55 ನಿಮಿಷಗಳ ಕಾಲ ನಡೆಯಿತು. ಎರಡು ದಿನಗಳ ಜಪಾನ್​ ಪ್ರವಾಸದ ಬಳಿಕ ಚೀನಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟಿಯಾಂಜಿನ್​ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಾರಿರುವ ಸುಂಕ ಸಮರದ ಬಿಕ್ಕಟ್ಟು ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ಪ್ರಮುಖ ಆರ್ಥಿಕತೆಗಳ ಮೇಲೆ ದೊಡ್ಡ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಎಸ್​ಸಿಒ ಶೃಂಗಸಭೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪ್ರಧಾನಿ ಮೋದಿ ಶನಿವಾರ ಚೀನಾಕ್ಕೆ ಬಂದಿಳಿದಿದ್ದು, ಏಳು ವರ್ಷಗಳ ಬಳಿಕ ನೆರೆಯ ರಾಷ್ಟ್ರಕ್ಕೆ ಅವರು ನೀಡಿದ ಮೊದಲ ಭೇಟಿ ಇದಾಗಿದೆ.

Category
ಕರಾವಳಿ ತರಂಗಿಣಿ