ಧರ್ಮಸ್ಥಳ: ನಮ್ಮ ಪುಣ್ಯಕ್ಷೇತ್ರಗಳ ಬಗ್ಗೆ ಅಪಪ್ರಚಾರ ಮಾಡಿದರೆ ಅದನ್ನು ನಾವು ಸಹಿಸಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಹಾಸನದಿಂದ ಧರ್ಮಸ್ಥಳದವರೆಗೆ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಸತ್ಯಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕ್ಷೇತ್ರದ ವಿರುದ್ಧ ಯಾವುದೇ ದುಷ್ಟ ಶಕ್ತಿ ಕೆಲಸ ಮಾಡಿದರೂ ಮಂಜುನಾಥ ಸ್ವಾಮಿ ಮುಂದೆ ಉಳಿವುದಕ್ಕೆ ಸಾಧ್ಯವಿಲ್ಲ. ಹಲವು ದಿನದಿಂದ ಪುಣ್ಯ ಕ್ಷೇತ್ರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಭಕ್ತರಾಗಿ ಇನ್ನೂ ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳಲು ಆಗಲ್ಲ.
ಧರ್ಮಸ್ಥಳ ಸತ್ಯಯಾತ್ರೆ ರಾಜಕೀಯ ಲಾಭದ ಲೆಕ್ಕಾಚಾರದ ವೇದಿಕೆಯಲ್ಲ. ಮಂಜುನಾಥ, ಅಣ್ಣಪ್ಪ ಸ್ವಾಮಿಯ ಭಕ್ತರು ದೇಶ ವ್ಯಾಪಿ, ವಿದೇಶದಿಂದ ಕೋಟ್ಯಂತರ ಸಂಖ್ಯೆಯಲ್ಲಿ ಇದ್ದಾರೆ. ನಾವು ಭಕ್ತರಾಗಿ ಬಂದು ಶರಣಾಗಿದ್ದೆವೆ. ರಾಜ್ಯ ವ್ಯಾಪ್ತಿಯಿಂದ ಬಂದು ಇಲ್ಲಿ ಸೇರಿ ಮಂಜುನಾಥ ಸ್ವಾಮಿ ಆಶೀರ್ವಾದ ಪಡೆದಿದ್ದೇವೆ.
ಅಪಪ್ರಚಾರ ನೋಡಿ ಭಕ್ತರಿಗೆ ಸಾಕಷ್ಟು ನೋವು ಉಂಟಾಗಿದೆ. ಖಾವಂದರು, ಕುಟುಂಬದ ಸದಸ್ಯರು ಎಷ್ಟೇ ನೋವಾದರೂ ತಾಳ್ಮೆ ಕಳೆದುಕೊಳ್ಳದೇ ಇದ್ದಾರೆ.
ಕ್ಷೇತ್ರ ಹಲವರಿಗೆ ದಾರಿ ದೀಪ ಆಗಿದೆ. ಧರ್ಮಸ್ಥಳದ ಖಾವಂದರ ಸಮಾಜಮುಖಿ ಹೋರಾಟ ಸೂರ್ಯ ಚಂದ್ರ ಇರೋವರೆಗೆ ಇರುತ್ತದೆ. ಹಲವು ದಿನದಿಂದ ಅಪಪ್ರಚಾರ, ಷಡ್ಯಂತ್ರ, ಹುನ್ನಾರ ಆಗುತ್ತಿದೆ. ವಿಧಾನಸೌಧದ ಅಧಿವೇಶನದಲ್ಲಿ ಕ್ಷೇತ್ರದ ವಿರುದ್ಧ ಷಡ್ಯಂತ್ರವಿದೆ ಎಂಬ ಪದ ಬಳಕೆ ಆಗಿದೆ. ವ್ಯವಸ್ಥಿತವಾಗಿ ವಿದೇಶದ ಹಣ ಹೂಡಿಕೆ ಮಾಡಿ ಕ್ಷೇತ್ರದ ಬಗ್ಗೆ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.
ಧರ್ಮಸ್ಥಳದಲ್ಲೇ ಜೆಡಿಎಸ್ ಕಾರ್ಯಕ್ರಮ ನಡೆದಿದ್ದು, ವೀರೇಂದ್ರ ಹೆಗ್ಗಡೆ ಅವರು ಕೂಡ ಭಾಗಿಯಾಗಿದ್ದರು.
ಸುರೇಶ್ ಬಾಬು, ಲೋಕಸಭಾ ಸದಸ್ಯರಾದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಬೋಜೆಗೌಡ, ರಾಜ್ಯ ಕೋರ ಕಮೀಟಿ ಸದಸ್ಯರಾದ ವೆಂಕಟರಾವ್ ನಾಡಗೌಡ, ಮಾಜಿ ಸಚಿವ ಎ.ಮಂಜು, ಶಾಸಕರಾದ ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ಮಾಜಿ ಶಾಸಕ ಸುರೇಶ್ ಗೌಡ, ಶಾಸಕಿ ಕರೆಯಮ್ಮನಾಯಕ್,
ಶಾರದಾ ಪೂರ್ಯನಾಯ್ಕ ಕೆ.ಆರ್.ಪೇಟೆ ಶಾಸಕರಾದ ಮಂಜುನಾಥ, ಶ್ರವಣಬೆಳಗೊಳ ಶಾಸಕರಾದ ಬಾಲಕೃಷ್ಣ, ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ್, ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ನಾಯಕ ಅಕ್ಷಿತ್ ಸುವರ್ಣ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.