image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಚೀನಾ ಬೆಂಬಲ...!

ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಚೀನಾ ಬೆಂಬಲ...!

ಟಿಯಾಂಜಿನ್‌: ಇಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ)ದ ಶೃಂಗಸಭೆ, ಹಲವಾರು ವಿಷಯಗಳಲ್ಲಿ ಭಾರತ-ಚೀನಾ ನಡುವಿನ ಸಹಕಾರ ಮತ್ತು ಒಮ್ಮತಕ್ಕೆ ಮುನ್ನುಡಿ ಬರೆದಿದೆ. ಭಾರತ ಮತ್ತು ಚೀನಾ ಸ್ನೇಹಪರ ರಾಷ್ಟ್ರಗಳು ಎಂಬ ಒಮ್ಮತದ ಘೋಷಣೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ನಡೆದ ದ್ವಿಪಕ್ಷೀಯ ಸಭೆ, ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧ ಸುಧಾರಣೆಯಲ್ಲಿ ಐತಿಹಾಸಿಕ ಪಾತ್ರ ನಿರ್ವಹಿಸಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ, ಚೀನಾ ಬೆಂಬಲ ಘೋಷಿಸಿದೆ. ಚೀನಾ ಅಧ್ಯಕ್ಷರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಪಾಕಿಸ್ತಾನ ಪ್ರೇರಿತ ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು. ಈ ವೇಳೆ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಚೀನಾ, ಭಯೋತ್ಪಾದನೆ ಎಂಬ ಪಿಡುಗನ್ನು ದೂರ ಮಾಡಲು "ಜಂಟಿ ಪ್ರಯತ್ನ"ಗಳಿಗೆ ಕರೆ ನೀಡಿದೆ. ಸಭೆಯಲ್ಲಿ ಭಯೋತ್ಪಾದನೆಯನ್ನು "ಮನುಕುಲದ ವಿನಾಶದ ಹಾದಿ" ಎಂದು ಕರೆದ ಪ್ರಧಾನಿ ಮೋದಿ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಸಂಬಂಧಗಳಲ್ಲಿ ತುಂಬಾ ಎಚ್ಚರಿಕೆವಹಿಸಬೇಕು ಎಂದು ಪರೋಕ್ಷವಾಗಿ ಪಾಕಿಸ್ತಾನದ ಕುರಿತು ಚೀನಾವನ್ನು ಎಚ್ಚರಿಸಿದರು. "ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ಭಯೋತ್ಪಾದನೆಯನ್ನು ಎದುರಿಸುತ್ತಿವೆ. ಭಾರತವಂತೂ ಉಗ್ರವಾದದ ವಿರುದ್ಧ ನಿರಂತರ ಯುದ್ಧವನ್ನೇ ನಡೆಸುತ್ತಿದೆ. ಆದರೆ ಕೆಲವು ರಾಷ್ಟ್ರಗಳು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ, ಈ ಪ್ರದೇಶದಲ್ಲಿ ಶಾಶ್ವತ ಅಶಾಂತಿ ನೆಲೆಯೂರಲು ಕಾರಣೀಭೂತವಾಗಿವೆ" ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು. ಭಯೋತ್ಪಾದನೆ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಅಭಿಪ್ರಾಯಗಳಿಗೆ ಸಹಮತಿ ಸೂಚಿಸಿರುಚ ಕ್ಸಿ ಜಿನ್‌ಪಿಂಗ್‌, "ಭಯೋತ್ಪಾದನೆ ವಿರುದ್ಧದ ಭಾರತದ ನಿರಂತರ ಹೋರಾಟವನ್ನು ಚೀನಾ ಶ್ಲಾಘಿಸುತ್ತದೆ ಮತ್ತು ಸಂಪೂರ್ಣ ಸಹಕಾರ ನೀಡುತ್ತದೆ" ಎಂದು ಭರವಸೆ ನೀಡಿದರು. ಇದೇ ವೇಳೆಭಯೋತ್ಪಾದನೆಯಂತಹ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು, ಸಾಮಾನ್ಯ ನೆಲೆಯನ್ನು ವಿಸ್ತರಿಸುವುದು ಅಗತ್ಯವೆಂಬ ಪ್ರಧಾನಿ ಮೋದಿ ಅವರ ಕರೆಗೂ ಚೀನಾ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಭಾರತದ ಪ್ರಾದೇಶಿಕ ಭದ್ರತಾ ಕಾಳಜಿಗಳ ಬಗ್ಗೆ ಚೀನಾ ಗಂಭೀರವಾಗಿ ಚಿಂತಿಸುತ್ತದೆ ಎಂದು ಭರವಸೆ ನೀಡಿರುವ ಕ್ಸಿ ಜಿನ್‌ಪಿಂಗ್‌, ಭಯೋತ್ಪಾದನೆಯನ್ನು ಹೋಗಲಾಡಿಸಲು ಭಾರತ ಮತ್ತು ಚೀನಾ "ಜಂಟಿ ಪ್ರಯತ್ನ"ಗಳಿಗೆ ಕರೆ ನೀಡಿದರು. ಚೀನಾದ ಈ ಹೇಳಿಕೆ ನೆರೆಯ ಪಾಕಿಸ್ತಾನವನ್ನು ಕಾಡಲಾರಂಭಿಸಿದೆ. ಪಾಕಿಸ್ತಾನದ ಸರ್ವಕಾಲಿಕ ಮಿತ್ರ ರಾಷ್ಟ್ರವಾಗಿ ಕಳೆದ ಜೂನ್‌ನಲ್ಲಿ ನಡೆದ ಎಸ್‌ಸಿಒ ರಕ್ಷಣಾ ಸಭೆಯಲ್ಲಿ, ಭಯೋತ್ಪಾದನೆ ವಿಚಾರವಾಗಿ ಚೀನಾ ಪಾಕಿಸ್ತಾನದ ಪರವಾಗಿ ಹೇಳಿಕೆಗಳನ್ನು ನೀಡಿತ್ತು. ಚೀನಾ ಮತ್ತು ಪಾಕಿಸ್ತಾನದ ಇರಾದೆಗಳನ್ನು ಮನಗಂಡ ಭಾರತ, ಸಭೆಯ ನಂತರ ಬಿಡುಗಡೆ ಮಾಡಲಾಗಿದ್ದ ಪಹಲ್ಗಾಮ್‌ ದಾಳಿ ಉಲ್ಲೇಖವಿರದ ದಾಖಲೆಗೆ ಸಹಿ ಹಾಕಲು ನಿರಾಕರಣೆ ಮಾಡಿತ್ತು. ಆದರೆ ಪ್ರಸ್ತುತ ಬದಲಾದ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಭಾರತ ಮತ್ತು ಚೀನಾವನ್ನು ಪರಸ್ಪರ ಹತ್ತಿರ ಬರುವಂತೆ ಮಾಡಿವೆ. ವಿಶೇಷವಾಗಿ ಎರಡೂ ರಾಷ್ಟ್ರಗಳ ಮೇಲಿನ ಅಮೆರಿಕದ ಹೆಚ್ಚುವರಿ ಸುಂಕ ಹೇರಿಕೆ, ಭಾರತ ಮತ್ತು ಚೀನಾದ ನಡುವಿನ ದೋಸ್ತಿಯನ್ನು ಮರುಜಾಗೃತಗೊಳಿಸಿದೆ.

Category
ಕರಾವಳಿ ತರಂಗಿಣಿ