ಧರ್ಮಸ್ಥಳ: ಹಿಂದೆ ಶಬರಿಮಲೆ, ಆಮೇಲೆ ಶನಿಸಿಂಗಾಪುರ, ಈಗ ಧರ್ಮಸ್ಥಳ. ದ.ಕ.ಜಿಲ್ಲೆಯಲ್ಲಿ ಹಿಂದುತ್ವದ ಅಲೆಯನ್ನು ಹಿಮ್ಮೆಟ್ಟಿಸಲಾಗಿಲ್ಲ. ಹಾಗಾಗಿ ಧರ್ಮಸ್ಥಳ ಶ್ರದ್ಧಾ ಕೇಂದ್ರದ ಮೇಲೆ ದಾಳಿ ಹಿಂದುತ್ವ ಧ್ವನಿ ಅಡಗಿಸಲು ರಾಜ್ಯ ಕಾಂಗ್ರೆಸ್ ಸರಕಾರದ ಷಡ್ಯಂತ್ರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಅವರು "ಶ್ರೀಕ್ಷೇತ್ರ ಧರ್ಮಸ್ಥಳ ಚಲೋ" ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್ ನಿರಂತರ ಷಡ್ಯಂತ್ರ ಮಾಡುತ್ತಾ ಬಂದಿದೆ. ಆದ್ದರಿಂದ ಈ ಬುರುಡೆ ಸರ್ಕಾರಕ್ಕೆ ಧಿಕ್ಕಾರ ಎಂದು ಹೇಳಿದರು. ಷಡ್ಯಂತ್ರ ಮಾಡಿದವರನ್ನು ನಾವು ಒಂದು ಕೈ ನೋಡ್ತೇವೆ. ಆದರೆ ಹೊಡೆಯೋದು ಬಡಿಯೋದು ಮಾಡಲ್ಲ. ಅವರನ್ನು ಸಮಾಜ ತಿರಸ್ಕಾರ ಮಾಡಬೇಕು. ಕಾಂಗ್ರೆಸ್ ಸದಾ ಕಾಲ ಹಿಂದೂಗಳನ್ನು ತಿರಸ್ಕಾರ ಮಾಡುತ್ತಾ ಬಂದಿದೆ. ಈ ಗುಣ ಅವರಿಗೆ ರಕ್ತದಲ್ಲೇ ಬಂದಿದೆ ಎಂದರು.
ಎಸ್ಐಟಿಯನ್ನು ನಾವು ಕೂಡ ಸ್ವಾಗತಿಸಿದೆವು. ಮುಸುಕುಧಾರಿ ವ್ಯಕ್ತಿ ಕಾಂಗ್ರೆಸ್‌ನ ಸ್ನೇಹಿತ. ಅವನಿಗೆ ಒದಿಬೇಕು ಅನಿಸಿಲ್ವಾ? ಅವನು ಬುರುಡೆ ಎಲ್ಲಿಂದ ತಂದ ಎಂದು ಸರಕಾರ ಏಕೆ ಕೇಳಿಲ್ಲ?. ಧರ್ಮಸ್ಥಳದ ಎಲ್ಲಾ ಕಡೆ ಅಗೆದು ಹಾಕಿದ್ದರು. ಇನ್ನೊಂದು ಸಮಾಜದ ಧಾರ್ಮಿಕ ಸ್ಥಳದಲ್ಲಿ ಹೀಗೆ ಮಾಡಲು ಸರಕಾರಕ್ಕೆ ಸಾಧ್ಯವೇ? ದರ್ಗಾದ ಬಳಿ ಹೀಗೆ ಅಗೆದು ಹಾಕಲು ಸಾಧ್ಯವೇ? ಹಿಂದೂಗಳೆಂದ್ರೆ ಕೇಳೋರಿಲ್ವಾ? ಜನರು ಛೀ ಥೂ ಎಂದು ಉಗಿದಾಗ ಅಗೆಯುವುದನ್ನು ನಿಲ್ಲಿಸಿದರು. ಯಾರು ಏನೇ ಪ್ರಯತ್ನಿಸಲಿ ಖಾವಂದರೇ ಮೋದಿ ಸರ್ಕಾರ ತಮ್ಮೊಂದಿಗಿದೆ. ಅಣ್ಣಪ್ಪನ ಆಶೀರ್ವಾದ ನಿಮಗಿದೆ ಎಂದು ಹೇಳಿದರು.
ಸಮಾವೇಶದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಸಿ ಟಿ ರವಿ, ಬಿ ಸಿ ಪಾಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಸಂಸದ ಕ್ಯಾ.ಬ್ರಿಜೇಶ್ ಚೌಟ, ತೇಜಸ್ವಿ ಸೂರ್ಯ, ರೇಣುಕಾಚಾರ್ಯ, ಮುನಿರತ್ನ, ಶ್ರೀರಾಮುಲು, ಸುದಾಕರ್ ರೆಡ್ಡಿ, ಸಂಸದರು, ಶಾಸಕರುಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.