image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಳೆ ವಿಮೆ ಗೊಂದಲದ ಬಗ್ಗೆ ಚಳಿಗಾಲದ ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಸದನದ ಗಮನ ಸೆಳೆದ ಕಿಶೋರ್ ಕುಮಾರ್ ಪುತ್ತೂರು

ಬೆಳೆ ವಿಮೆ ಗೊಂದಲದ ಬಗ್ಗೆ ಚಳಿಗಾಲದ ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಸದನದ ಗಮನ ಸೆಳೆದ ಕಿಶೋರ್ ಕುಮಾರ್ ಪುತ್ತೂರು

ಬೆಳಗಾವಿ:  ಚಳಿಗಾಲದ ವಿಧಾನ ಪರಿಷತ್ ಅಧಿವೇಶನದ ಶೂನ್ಯವೇಳೆಯ ಸಂದರ್ಭದಲ್ಲಿ, ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು  ರಾಜ್ಯದ ಕೃಷಿಕರನ್ನು ಗಂಭೀರ ನಿರಾಶೆಯಲ್ಲಿಟ್ಟಿರುವ ಬೆಳೆ ವಿಮೆ ಪರಿಹಾರ ಸಂಬಂಧಿಸಿದ ಸಮಸ್ಯೆಯನ್ನು ಸದನದ ಗಮನಕ್ಕೆ ತಂದರು. ದಿನಪತ್ರಿಕೆಯೊಂದರಲ್ಲು  ವರದಿಯಾಗಿರುವ ವಿಷಯವನ್ನು ಉಲ್ಲೇಖಿಸಿ, ಪರಿಹಾರದ ಮೊತ್ತವು ರೈತರಿಗೆ ತಲುಪದೇ ಇರುವ ವಾಸ್ತವಿಕ ಸ್ಥಿತಿಯನ್ನು ಕಿಡಿಕಾರಿದ್ದಾರೆ.

ರಾಜ್ಯದ ಶೇಕಡಾ 60 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿರುವ ಕೃಷಿ ವಲಯವು ಈ ಬಾರಿ ಅತಿಯಾದ ಮಳೆ, ಉಷ್ಣತೆಯ ಏರುಪೇರಿನಿಂದ ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಅಡಿಕೆ ಸೇರಿದಂತೆ ಅನೇಕ ಬೆಳೆಗಳು ಶೇ. 75 ಕ್ಕೂ ಹೆಚ್ಚು ಹಾನಿಗೊಳಗಾದರೂ, ಹವಾಮಾನ ಆಧಾರಿತ ಬೆಳೆ ವಿಮೆ ರೈತರಿಗೆ ನಿರಾಶೆ ಮೂಡಿಸಿದೆ. ಕೆಲವು ಪ್ರದೇಶಗಳಲ್ಲಿ ಕಟ್ಟಿ ಪಾವತಿಸಿದ ವಿಮಾ ಪ್ರೀಮಿಯಂಗೂ ಸಮನಾಗದ ಪರಿಹಾರ ಮೊತ್ತ ಜಮೆಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ತೀವ್ರ ಮಳೆ, ಮಾರ್ಚ್-ಏಪ್ರಿಲ್ ನಲ್ಲಿ ಅತಿಯಾದ ಬಿಸಿಲು ಬಿಸಿಲು, ಮೇ ನಂತರ ಆರು ತಿಂಗಳು ನಿರಂತರ ಮಳೆಯಿದ್ದರೂ ವಿಮೆ ಪರಿಹಾರವು ಅದರ ಅನುರೂಪವಾಗಿ ಲಭಿಸದಿರುವುದನ್ನು ಶಾಸಕರು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ, ಪರಿಹಾರ ಮೊತ್ತವು ಹಿಂದಿನ ವರ್ಷಗಳಿಗಿಂತ ತಡವಾಗಿ ಅಂದರೆ ಸೆಪ್ಟೆಂಬರ್/ಅಕ್ಟೋಬರಿನ ಬದಲು ಇದೀಗ ಡಿಸೆಂಬರ್ ತಿಂಗಳಲ್ಲಿ ಬರುವುದರಿಂದ ಕೃಷಿ ಚಟುವಟಿಕೆಗಳೇ ಕುಂಠಿತಗೊಳ್ಳುತ್ತಿರುವ ಬಗ್ಗೆ ಶಾಸಕರು ಗಂಭೀರ ಕಳವಳ ವ್ಯಕ್ತಪಡಿಸಿದರು.ವಿಮಾ ಪರಿಹಾರವನ್ನು ಸಕಾಲದಲ್ಲಿ ರೈತರ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಅನಿವಾರ್ಯ.ಈ ಬಾರಿ ನೀಡಿರುವ ಮೊತ್ತ ಪೂರ್ಣ ಪರಿಹಾರವೇ ಅಥವಾ ಮಧ್ಯಂತರ ಪರಿಹಾರವೇ? ಎಂಬುದನ್ನು ಸರ್ಕಾರ ತಕ್ಷಣ ಸ್ಪಷ್ಟಪಡಿಸಬೇಕು.

ರಾಜ್ಯದ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು, ‘ಸುಳಿ ಕೊಳೆ ರೋಗ’ ತೀವ್ರವಾಗಿರುವ ಕಾರಣ ತೆಂಗು ಬೆಳೆಯನ್ನು ಕೂಡ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕೆಂದು ಹೇಳಿದರು.

ಗ್ರಾಮಗಳಲ್ಲಿ ಇರುವ ಮಳೆಮಾಪಕ ಮತ್ತು ಹವಾಮಾನ ದಾಖಲು ಸಾಧನಗಳು ಸರಿಯಾಗಿಲ್ಲದಿರುವುದರಿಂದ ವಿಮಾ ಲೆಕ್ಕಾಚಾರದಲ್ಲೇ ತಪ್ಪುಗಳು ಸಂಭವಿಸುತ್ತಿದ್ದು, ಅವನ್ನು ತಕ್ಷಣ ದುರಸ್ಥಿಗೊಳಿಸಬೇಕು ಎಂಬುದಾಗಿ ಒತ್ತಾಯಿಸಿದರು.

ಕೃಷಿಕರ ನಷ್ಟಕ್ಕೆ ಹೊಂದುವಂತೆ ಖಾಸಗಿ ಅಥವಾ ರೈತರೇ ದಾಖಲಿಸಿರುವ ಮಳೆಪ್ರಮಾಣ ಆಧರಿಸಿ ಪರಿಹಾರ ನೀಡುವ ಮಾರ್ಗವನ್ನೂ ಸರ್ಕಾರ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.ಶಾಸಕರು ಕೊನೆಗೆ ಸರ್ಕಾರವನ್ನು ಗಂಭೀರವಾಗಿ ಎಚ್ಚರಿಸಿ, “ಕೃಷಿಕರ ನೋವನ್ನು ತಕ್ಷಣ ಗಮನಿಸಿ, ಸೂಕ್ತ ಪರಿಹಾರ ಮತ್ತು ಸ್ಪಷ್ಟ ಉತ್ತರ ನೀಡುವುದು ಸರ್ಕಾರದ ಕರ್ತವ್ಯ” ಎಂದು ಆಗ್ರಹಿಸಿದರು.

ಶಾಸಕರ ಮಾತು ಆಲಿಸಿದ ನಂತರ, ಸಭಾನಾಯಕರು ಸಂಬಂಧಪಟ್ಟ ಸಚಿವರಿಗೆ ಜರುಗಿದ ವಿವರಗಳನ್ನು ತಕ್ಷಣ ಒದಗಿಸಲು ಮತ್ತು ಇದರ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳಲು ಸೂಚನೆ ನೀಡುವುದಾಗಿ ಘೋಷಿಸಿದರು.

Category
ಕರಾವಳಿ ತರಂಗಿಣಿ