ಮಂಗಳೂರು: ಕೇಂದ್ರ ಜಿಎಸ್‌ಟಿ ಕೌನ್ಸಿಲ್ ಜಿಎಸ್‌ಟಿ ಸ್ಲ್ಯಾಬ್‌ಗಳನ್ನು 4ರಿಂದ 2ಕ್ಕೆ ಇಳಿಸಿದ್ದು, ಇದರಿಂದ ಮಹಿಳೆಯರು, ರೈತರು, ವಿದ್ಯಾರ್ಥಿಗಳ ಸಹಿತ ಜನಸಾಮಾನ್ಯರಿಗೆ ಲಾಭವಾಗಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದರು. ಅವರು ನಗರದ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರಕಾರದ ಬಂಪರ್ ಉಡುಗೊರೆ ಇದಾಗಿದೆ. ವಿಕಸಿತ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪೂರಕವಾಗಿ ಜನರಿಗೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಈ ನಿರ್ಧಾರ ಶಕ್ತಿ ನೀಡಲಿದೆ. ನಿತ್ಯ ಬಳಕೆಯ ವಸ್ತುಗಳು ಶೇ.5ರ ಸ್ಲಾಬ್‌ಗೆ ಸೇರ್ಪಡೆಗೊಂಡಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆ ಕಡಿಮೆ ಯಾಗಿದೆ. ಆರ್ಥಿಕತೆ, ಕೈಗಾರಿಕೆಗಳಿಗೆ ಉತ್ತೇಜನ ದೊರೆಯಲಿದೆ. ಸಾಮಾನ್ಯ ಜನರಿಗೆ ನೆಮ್ಮದಿಯ ಸಂಗತಿ. ಆರೋಗ್ಯ ಕ್ಷೇತ್ರದಲ್ಲಿ ಜೀವರಕ್ಷಕ ಔಷಧಿಗಳಿಗೆ ತೆರಿಗೆ ಇಳಿಸಿರುವುದು ದೊಡ್ಡ ಕೊಡುಗೆಯಾಗಿದೆ. ವೇತನ ಪಡೆಯುವ ವರ್ಗದ ಮೇಲಿದ್ದ ಹೊರೆಯೂ ಕಡಿಮೆಯಾಗಿದೆ ಎಂದರು.
ದ.ಕ. ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಠಿಯಿಂದ ಹಲವೆಡೆ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಬೇಕು. ಮಳೆಹಾನಿ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಬ್ರಿಜೇಶ್ ಚೌಟ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಆರ್ಥಿಕ ಪ್ರಕೋಷ್ಠ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ, ಅರುಣ್ ಶೇಟ್, ವಸಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.