ಸುರತ್ಕಲ್: ಮಂಗಳೂರು ಉತ್ತರ ವಿಧಾನ ಸಭಾ ವ್ಯಾಪ್ತಿಯ ಮಂಗಳೂರು ಮಹಾ ನಗರ ಪಾಲಿಕೆಯ ವಾರ್ಡ್ ಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ವಿವಿಧ ಕಾರ್ಯಗಳಿಗಾಗಿ ಕುಂಟುತ್ತಾ ಸಾಗಿದ್ದು,ಶಾಸಕ ಡಾ. ಭರತ್ ಶೆಟ್ಟಿ ವೈ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.
ಸುರತ್ಕಲ್ ಪಾಲಿಕೆಯ ಶಾಸಕರ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡದೆ ಸಮಸ್ಯೆಯಿಂದ ಕಾಮಗಾರಗಳ ವೇಗಕ್ಕೆ ತಡೆಯಾಗಿದೆ ಎಂದರು.ಆಗ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸದೆ ಇಂತಹ ಎಡವಟ್ಟುಗಳಿಗೆ ಕಾರಣವಾಗಿದೆ
ಯಾವುದೇ ಸಮಸ್ಯೆಗಳು ಎದುರಾದರೂ ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಇದರಿಂದ ಕನಿಷ್ಠಪಕ್ಷ ಮೇಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಸಭೆಯಲ್ಲಿ ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ನಿಗದಿತ ಸಮಯದ ಒಳಗೆ ಪೂರ್ತಿ ಗೊಳಿಸುವಂತಿರಬೇಕು. ಅಡೆತಡೆಗಳು ಎದುರಾಗಿದೆ ಎಂದು ತಮ್ಮಷ್ಟಕ್ಕೆ ತಾವೇ ದೂರ ಉಳಿದರೆ ಸಮಸ್ಯೆ ಪರಿಹಾರ ಕಾಣಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕುಳಾಯಿ ರೈಲ್ವೆ ಮೇಲ್ ಸೇತುವೆ ಕಾಂಕ್ರಿಟ್ ಮಾಡಲು ವಾಹನ ಸಂಚಾರ ಡೈವರ್ಟ್ ಮಾಡಲು ಪೊಲೀಸ್ ಇಲಾಖೆಯ ಪಣಂಬೂರು ಎಸಿಪಿ ಅವರಲ್ಲಿ ಮಾತನಾಡಿ, ಎರಡು ದಿನದ ಅವಧಿಯಲ್ಲಿ ಕೆಲಸ ಆರಂಭಿಸಲು ಬೇಕಾದ ಪೂರ್ವ ತಯಾರಿ ನಡೆಸಲಾಗಿದೆ ತಕ್ಷಣ ವಾಹನ ಸಂಚಾರದಲ್ಲಿ ಬದಲಾವಣೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.
ಮರಕಡ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಅನುದಾನ ಮೀಸಲಿಡಲು ಆಯುಕ್ತರಿಗೆ ಮನವಿಯನ್ನು ಅರ್ಪಿಸಿದ್ದೇನೆ.
ತಕ್ಷಣಕ್ಕೆ ಶಾಶ್ವತ ಕಾಮಗಾರಿ ಆಗದೆ ಹೋದರೂ, ಪ್ಯಾಚ್ ವರ್ಕ್ ಕೆಲಸಕ್ಕೆ ಕೂಡಲೇ ಯೋಜನೆ ರೂಪಿಸಬೇಕು. ಇಲ್ಲದೆ ಹೋದಲ್ಲಿ ಸಾರ್ವಜನಿಕರೊಂದಿಗೆ ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಸುರತ್ಕಲ್ ಮಾರ್ಕೆಟ್ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಲು ವ್ಯಾಪಾರಿಗಳ ಸ್ಥಳಾಂತರ, ಬಾಕಿ ಉಳಿದಿರುವ ಭೂಸ್ವಾಧೀನ ಸಮಸ್ಯೆ ಇತ್ಯರ್ಥ ಮಾಡಲು ಗಮನಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಒಳಚರಂಡಿ ಕಾಮಗಾರಿ ಅವ್ಯವಸ್ಥೆ ಮುಂದುವರಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಅಧಿಕಾರಿಗಳು ಕೂಡಲೇ ವೆಟ್ ವೆಲ್ ಪ್ರದೇಶಗಳಿಗೆ ಬೇಕಾದ ಜನರೇಟರ್ ಅಳವಡಿಕೆ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವನ್ನು ಜರಗಿಸಿ, ಒಳಚರಂಡಿ ನೀರು ತೋಡುಗಳಲ್ಲಿ ಹರಿಯದಂತೆ ಕ್ರಮವಾಗಬೇಕು ಎಂದು ಸೂಚಿಸಿದರು. ಮುಂಚೂರು ಪ್ರದೇಶದಿಂದ ಎಸ್ಟಿಪಿ ನೀರನ್ನು ಎಂ ಆರ್ ಪಿ ಎಲ್ ಕಂಪನಿಗೆ ಅನ್ಯಬಳಕೆ ಉದ್ದೇಶಕ್ಕೆ ಪೈಪ್ ಲೈನ್ ಮೂಲಕ ಕೊಂಡೊಯ್ಯಲು ಮನವಿ ಮಾಡಲಾಗಿತ್ತು. ಪ್ರಥಮ ಹಂತದ ಸಭೆ ನಡೆದಿದ್ದು ಅಧಿಕಾರಿಗಳೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸುವುದಾಗಿ ಶಾಸಕರು ಭರವಸೆ ನೀಡಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತರಾದ ನರೇಶ್ ಶೆಣೈ, ಸುರತ್ಕಲ್ ಪಾಲಿಕೆಯ ವಿಭಾಗೀಯ ಆಯುಕ್ತೆ ವಾಣಿ ಆಳ್ವ,ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ವರುಣ್ ಚೌಟ, ಸರಿತಾ ಶಶಿಧರ್, ಶ್ವೇತಾ ಪೂಜಾರಿ, ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್, ಅಧಿಕಾರಿಗಳು ಉಪಸ್ಥಿತರಿದ್ದರು.