ಮಂಗಳೂರು: ಕೆಂಪು ಕಲ್ಲು ಗಣಿಗಾರಿಕೆಯ ಸಮಸ್ಯೆ ಸರಿಪಡಿಸಲು ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ಕ್ರಮ ಕೈಗೊಂಡ ಬಗ್ಗೆ ಗೊತ್ತಿದ್ದು, ಬಿಜೆಪಿಯ ಶಾಸಕರು ಸೇರಿ ಪ್ರತಿಭಟನೆ ನಡೆಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪು ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಬಿಜೆಪಿಯ ರಾಜಕೀಯ ನಟನೆ ಮಾಡುತ್ತಿದೆ. ಅವರಿಗೆ ಜನರ ಬಗ್ಗೆ ಪ್ರಾಮಾಣಿಕವಾದ ಕಾಳಜಿಯಿಲ್ಲ. ಅವರು ಹಾಡು ಹೇಳಿಕೊಂಡು, ಡ್ಯಾನ್ಸ್ ಮಾಡಿ ಮಾಡಿದ ಪ್ರತಿಭಟನೆ ಪಿಕ್ನಿಕ್ ಮಾಡಿದ ಹಾಗಿತ್ತು ಎಂದು ಲೇವಡಿ ಮಾಡಿದರು.
ದ.ಕ. ಸಂಸದರು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ಬದಲು ತಮ್ಮಿಂದ ಸಾಧ್ಯವಾಗುವ ಕೆಲಸವನ್ನು ಮಾಡಬಹುದಿತ್ತು. ಸಿಆರ್ ಝಡ್ ನಿಯಮ ಸಡಿಲಗೊಳಿಸಲು ಪ್ರಯತ್ನ ಮಾಡಬಹುದಿತ್ತು. ರಾಷ್ಟ್ರೀಯ ಹೆದ್ದಾರಿಗಳು ರಸ್ತೆ ಹೊಂಡಗಳಿಂದ ತುಂಬಿ ಅವೈಜ್ಞಾನಿಕ ಕಾಮಗಾರಿಗಳಿಂದ ವಾಹನ ಸವಾರರು ಸಾರ್ವಜನಿಕರು ಪರದಾಡುವಂತಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರದಿಂದ ಆಗಿಲ್ಲ. ಅಭಿವೃದ್ಧಿ ಕೆಲಸದಲ್ಲಿ ಈ ರೀತಿಯ ರಾಜಕೀಯ ಬೇಡ ಎಂದರು.
ಕಾಂಗ್ರೆಸ್ ಮುಖಂಡ ಪದ್ಮರಾಜ್ ಮಾತನಾಡಿ, ಜಾತಿ ಜನ ಗಣತಿ ಸಾಮಾಜಿಕ ನ್ಯಾಯದ ಉದ್ದೇಶದಿಂದ ಸರಕಾರ ಹಮ್ಮಿಕೊಂಡಿದ್ದು, ಇದರ ಬಗ್ಗೆ ಬಿಜೆಪಿ ಅಪಸ್ತರ ಎತ್ತಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಶಶಿಧರ ಹೆಗ್ಡೆ, ಮುಹಮ್ಮದ್ ಮೋನು,ನೀರಜ್ ಪಾಲ್, ಶುಭೋದಯ ಆಳ್ವ ಮೊದಲಾದವರು ಉಪಸ್ಥಿತರಿದ್ದರು.