ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಇಂಡಿಯಾ ಮೈತ್ರಿಕೂಟ ಭರ್ಜರಿ ಕಾರ್ಯತಂತ್ರವನ್ನು ರೂಪಿಸಿದೆ. ಕರ್ನಾಟಕ ಮಾದರಿಯ ಗ್ಯಾರಂಟಿಗಳನ್ನು ನೀಡಿ ಬಿಹಾರ ಮತದಾರರನ್ನು ಸೆಳೆಯಲು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಮುಂದಾಗಿದೆ. ಪಾಟ್ನಾದಲ್ಲಿ ಪ್ರಣಾಳಿಕೆ ಬಿಡುಗಡೆಗೆ ಮುನ್ನ, ಕಾಂಗ್ರೆಸ್ ನಾಯಕ ಕೃಷ್ಣ ಅಲ್ಲವರು ಬಿಹಾರ ಜನತೆಗೆ ಮಹಾಘಟಬಂಧನ್‌ನ ಪ್ರಮುಖ ಭರವಸೆಗಳ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., 25 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಭೂರಹಿತ ಕುಟುಂಬಗಳಿಗೆ ಭೂಮಿ ನೀಡಲಾಗುವುದು ಎಂದು ತಿಳಿಸಿದ್ದಾರೆ. 243 ಸದಸ್ಯರ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಸಂಘಟನೆಯ ಸಿದ್ಧಾಂತ ಧಿಕ್ಕರಿಸಿದ ಆರೋಪದ ಮೇಲೆ ಇಬ್ಬರು ಶಾಸಕರು ಸೇರಿ 27 ನಾಯಕರನ್ನು ಆರ್‌ಜೆಡಿ ಪಕ್ಷದಿಂದ ಉಚ್ಚಾಟಿಸಿದೆ.
ವಿಧಾನಸಭೆ ಚುನಾವಣಾ ಪ್ರಚಾರದ ಕಾವಿನ ಮಧ್ಯೆ ಇಬ್ಬರು ಶಾಸಕರು, ನಾಲ್ವರು ಮಾಜಿ ಶಾಸಕರು ಮತ್ತು ಓರ್ವ ವಿಧಾನ ಪರಿಷತ್ ಸದಸ್ಯ ಸೇರಿ 27 ನಾಯಕರನ್ನು ಪಕ್ಷದಿಂದ ಹೊರಹಾಕಿ, ಆರ್‌ಜೆಡಿ ಶಾಕ್ ನೀಡಿದೆ. ಉಚ್ಚಾಟಿತ ನಾಯಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತುಗೊಳಿಸಲಾಗಿದೆ ಎಂದು ಆರ್‌ಜೆಡಿ ರಾಜ್ಯಾಧ್ಯಕ್ಷ ಮಂಗನಿ ಲಾಲ್ ಮಂಡಲ್ ಮಾಹಿತಿ ನೀಡಿದ್ದಾರೆ. "ಆರ್‌ಜೆಡಿ ಅಥವಾ ಮಹಾಘಟಬಂಧನ್ ಅಭ್ಯರ್ಥಿಗಳ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದ ನಂತರ ಇವರ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಂಡಿದೆ" ಎಂದು ಆರ್‌ಜೆಡಿ ರಾಜ್ಯಾಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಉಚ್ಚಾಟಿಸಲಾದ ನಾಯಕರು I.N.D.I.A ಕೂಟ ಮತ್ತು ಆರ್‌ಜೆಡಿ ಅಧಿಕೃತವಾಗಿ ಘೋಷಿಸಿದ ಅಭ್ಯರ್ಥಿಗಳ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದರು" ಎಂದು ಆರ್‌ಜೆಡಿ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ, ಬಿಹಾರ ಬಿಜೆಪಿ ಘಟಕವು ಕಹಲ್ಗಾಂವ್ ಶಾಸಕ ಪವನ್ ಯಾದವ್ ಸೇರಿದಂತೆ ಪಕ್ಷದ ಇತರ ಆರು ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಹೊರಹಾಕಿದೆ. ಭಾನುವಾರ ಸಂಜೆ ಬಿಡುಗಡೆಯಾದ ಪಕ್ಷದ ಹೇಳಿಕೆಯ ಪ್ರಕಾರ, ಶಾಸಕ ಸೇರಿದಂತೆ ಉಚ್ಚಾಟಿತ ನಾಯಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.