image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಿತೀಶ್‌ ಕುಮಾರ್‌ ದಾಖಲೆಯ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ?

ನಿತೀಶ್‌ ಕುಮಾರ್‌ ದಾಖಲೆಯ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ?

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಮುಗಿದಿದೆ. ಆಡಳಿತಾರೂಢ ಎನ್‌ಡಿಎ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರ ಸೂತ್ರ ತನ್ನದಾಗಿಸಿದೆ. ಈಗ ಉಳಿದಿರುವ ಕುತೂಹಲ ಎಂದರೆ ಅದು ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ. ಅದಕ್ಕೆ ಉತ್ತರ ಸಿಗುವ ಕ್ಷಣಗಳು ಹತ್ತಿರವಾಗಿದೆ. ಬಿಜೆಪಿ, ಜೆಡಿಯು ಮತ್ತು ಎಲ್‌ಜೆಪಿ ಪ್ರಮುಖವಾಗಿರುವ ಎನ್‌ಡಿಎ ಕೂಟದಲ್ಲಿ ಇದೀಗ ಕ್ಯಾಬಿನೆಟ್‌ ಕಸರತ್ತು ನಡೆಯುತ್ತಿದೆ. ಮೂಲಗಳ ಪ್ರಕಾರ ಇನ್ನು ಎರಡ್ಮೂರು ದಿನದೊಳಗೆ ಬಿಹಾರದಲ್ಲಿ ಸರ್ಕಾರ ರಚನೆ ಕೆಲಸ ನಡೆಯಲಿದೆ. ನ.19 ಅಥವಾ 20ರಂದು ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವೇಳಾಪಟ್ಟಿಯನ್ನು ಅನುಸರಿಸಿ ದಿನಾಂಕ ಅಂತಿಮವಾಗಲಿದೆ. ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಭಾರಿ ಬಹುಮತದೊಂದಿಗೆ ಗೆದ್ದಿತ್ತು, ಜೆಡಿಯು ಮತ್ತು ಬಿಜೆಪಿ ಎರಡೂ 2020 ಗಿಂತ ಉತ್ತಮ ಸಾಧನೆ ಮಾಡಿದೆ. ಬಿಜೆಪಿ 89 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಜೆಡಿಯು 85 ಸ್ಥಾನಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಎಲ್‌ಜೆಪಿ (ಪಾಸ್ವಾನ್), ಎಚ್‌ಎಎಂ ಮತ್ತು ಆರ್‌ಎಲ್‌ಎಂ ನಂತಹ ಸಣ್ಣ ಮಿತ್ರಪಕ್ಷಗಳು ಸಹ ಉತ್ತಮ ಪ್ರದರ್ಶನ ನೀಡಿದವು.‌

18ನೇ ಬಿಹಾರ ವಿಧಾನಸಭೆ ರಚನೆಗೆ ಅಧಿಸೂಚನೆ ಹೊರಡಿಸುವುದರೊಂದಿಗೆ ಸರ್ಕಾರ ರಚನೆ ಪ್ರಕ್ರಿಯೆಯು ರವಿವಾರ ವೇಗ ಪಡೆದುಕೊಂಡಿದೆ. ಚುನಾವಣಾ ಆಯೋಗವು ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಅಂತಿಮ ಫಲಿತಾಂಶಗಳ ಕುರಿತು ಮಾಹಿತಿ ನೀಡಲಿದ್ದು, ನಂತರ ಮಾದರಿ ನೀತಿ ಸಂಹಿತೆ ಕೊನೆಗೊಳ್ಳಲಿದೆ. ಸೋಮವಾರ ನಿತೀಶ್ ಕುಮಾರ್ ಸಂಪುಟ ಸಭೆ ಕರೆದಿದ್ದಾರೆ. 17 ನೇ ವಿಧಾನಸಭೆಯ ವಿಸರ್ಜನೆಗೆ ಸಭೆಯಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಯಿದೆ. ನಿರ್ಣಯ ಅಂಗೀಕಾರವಾದ ನಂತರ, ನಿತೀಶ್ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಖಾನ್ ಅವರಿಗೆ ಸಲ್ಲಿಸಲಿದ್ದಾರೆ. ಅಲ್ಲಿಂದ ಮುಂದಿನ ಹಂತದ ಸರ್ಕಾರ ರಚನೆ ಕಾರ್ಯ ಆರಂಭವಾಗುತ್ತದೆ. ಇದಾದ ಬಳಿಕ ಎನ್‌ಡಿಎ ಕೂಟದ ಪಕ್ಷಗಳು ಮೈತ್ರಿಕೂಟದ ನಾಯಕನನ್ನು ಆಯ್ಕೆ ಮಾಡಲು ತಮ್ಮ ಶಾಸಕಾಂಗ ಪಕ್ಷದ ಸಭೆಗಳನ್ನು ನಡೆಸುತ್ತವೆ. ಆಯ್ಕೆ ಅಂತಿಮವಾದ ಬಳಿಕ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತವೆ.

ಮುಂದಿನ ಬುಧವಾರ ಅಥವಾ ಗುರುವಾರ ಬಿಹಾರದಲ್ಲಿ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ದೊಡ್ಡ ಸಮಾವೇಶ ನಡೆಸಲು ಈಗಾಗಲೇ ಸಿದ್ದತೆ ಆರಂಭವಾಗಿದೆ. ಮೂಲಗಳ ಪ್ರಕಾರ, ನಿತೀಶ್‌ ಕುಮಾರ್‌ ಅವರು ದಾಖಲೆಯ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ, ಎನ್‌ಡಿಎ ಅಧಿಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ನಾಯಕರು, ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.

Category
ಕರಾವಳಿ ತರಂಗಿಣಿ