image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆನ್ನಲ್ಲಿ ಚೂರಿ ಹಾಕುವವನಲ್ಲ, ಮುಖಾಮುಖಿ ಹೋರಾಟ ನಡೆಸುತ್ತೇನೆ : ಡಿ. ಕೆ. ಶಿ

ಬೆನ್ನಲ್ಲಿ ಚೂರಿ ಹಾಕುವವನಲ್ಲ, ಮುಖಾಮುಖಿ ಹೋರಾಟ ನಡೆಸುತ್ತೇನೆ : ಡಿ. ಕೆ. ಶಿ

ಬೆಂಗಳೂರು - ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾನು ಯಾವತ್ತೂ ಬೆನ್ನಲ್ಲಿ ಚೂರಿ ಹಾಕುವವನಲ್ಲ, ಮುಖಾಮುಖಿ ಹೋರಾಟ ನಡೆಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದು ನಮಿಬ್ಬರ ಗುರಿ ಎಂದರು. ತಾವು ದೆಹಲಿಗೆ ಹೋಗಿದ್ದಾಗ 8-10 ಮಂದಿ ಶಾಸಕರನ್ನು ಜೊತೆಗೆ ಕರೆದುಕೊಂಡು ಹೋಗಬಹುದಿತ್ತು. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಶಾಸಕರನ್ನು ಜೊತೆಗೆ ಕರೆದುಕೊಂಡು ಹೋಗುವುದು ದೊಡ್ಡ ಕೆಲಸವೇನಲ್ಲ. ಪಕ್ಷದ ಅಧ್ಯಕ್ಷರಾಗಿರುವ ತಾವು 140 ಮಂದಿ ಶಾಸಕರಲ್ಲೂ ತಾರತಮ್ಯ ಮಾಡದೇ, ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು. ಈ ಹಿಂದೆ ಹೆಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವನಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಯಾವ ಮಟ್ಟಿನ ಪ್ರಾಮಾಣಿಕತೆ ಎಂಬುದು ನನ್ನ ಆತಸಾಕ್ಷಿ ಮತ್ತು ದೇವರಿಗೆ ಗೊತ್ತಿದೆ. ಕೊನೆಯ ಕ್ಷಣದವರೆಗೂ ಸರ್ಕಾರ ಉಳಿಸಲು ಪ್ರಯತ್ನ ಮಾಡಿದ್ದೇನೆ. ಅದು ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತು. ಕುಮಾರಸ್ವಾಮಿ ನನ್ನ ನಿಷ್ಠೆಯ ಬಗ್ಗೆ ಒಪ್ಪದೇ ಇರಬಹುದು. ಅದು ಬೇರೆ ವಿಚಾರ. ಅವರು ಏನೂ ಬೇಕಾದರೂ ಮಾತನಾಡಿಕೊಳ್ಳಲಿ, ನಾನು ಯಾವತ್ತೂ ಬೆನ್ನಿಗೆ ಚೂರಿ ಹಾಕುವವನಲ್ಲ. ಎದುರಿಗೆ ಹೋರಾಟ ಮಾಡುತ್ತೇನೆ, ನನ್ನ ಬದುಕು ಇದೇ ರೀತಿ ಇರುತ್ತದೆ ಎಂದು ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕರ್ನಾಟಕದ ಸೂಪರ್‌ ಸಿಎಂ ಎಂಬ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷವಾಗಿರುವ ಬಿಜೆಪಿ ತಾನು ಬದುಕಿದ್ದೇನೆ ಎಂದು ತೋರಿಸಿಕೊಳ್ಳಬೇಕು.

ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದರು. ಇತ್ತೀಚಿನ ಬೆಳವಣಿಗೆಗಳಲ್ಲಿ ಸ್ವಾಮೀಜಿಗಳ ಮಧ್ಯ ಪ್ರವೇಶಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್‌, ಈ ಹಿಂದೆ ಒಕ್ಕಲಿಗ ಸಮುದಾಯಕ್ಕಾಗಿ ಎರಡನೇ ಮಠ ಹೇಗೆ ಆಯಿತು. ಸ್ವಾಮೀಜಿ ಇಲ್ಲದೇ ಹೋಗಿದ್ದರೆ ದೇವೇಗೌಡರು ಮುಖ್ಯಮಂತ್ರಿಯಾಗುತ್ತಿದ್ದರೇ? ಆ ವೇಳೆ ಸ್ವಾಮೀಜಿ ರಸ್ತೆಗೆ ಇಳಿಯಲಿಲ್ಲವೇ? ಸದಾನಂದಗೌಡರಿಗೆ ತೊಂದರೆಯಾದಾಗ ಸ್ವಾಮೀಜಿ ಸುಮನೆ ಇದ್ದರೇ? ಎಂದು ಪ್ರಶ್ನಿಸಿದರು. ಕೆಲವು ಸಂದರ್ಭಗಳ ಕೆಲವರು ಮಾತನಾಡುತ್ತಾರೆ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೇರೆ ಸ್ವಾಮೀಜಿಗಳು ಮಾತನಾಡಿದ್ದಾರೆ. ಅದಕ್ಕೆ ನಾವು ಬೇಜಾರು ಮಾಡಿಕೊಳ್ಳಲು ಸಾಧ್ಯವೇ? ತಾವು ಯಾವ ಸ್ವಾಮೀಜಿಯವರ ಬೆಂಬಲವನ್ನೂ ಕೇಳಲಿಲ್ಲ ಎಂದರು. ತಾವು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿರಬಹುದು. ಆದರೆ ಎಲ್ಲಾ ಜಾತಿಗಳನ್ನು ಪ್ರೀತಿಸುತ್ತೇನೆ. ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು, ಶ್ರೀ ಶೈಲದ ಶ್ರೀಗಳು ನನ್ನ ಪರವಾಗಿ ಮಾತನಾಡಿದ್ದಾರೆ. ಜೈನ ಸಮುದಾಯದ ಸ್ವಾಮೀಜಿ ಕೂಡ ಬಹಿರಂಗವಾಗಿಯೇ ನನಗೆ ಆಶೀರ್ವಾದ ಮಾಡಿದರು. ಧರ್ಮಸ್ಥಳದಲ್ಲೂ ನನ್ನ ಬಗ್ಗೆ ಮಾತನಾಡಿದ್ದಾರೆ. ಅವರಿಗೆಲ್ಲಾ ನನ್ನ ಮೇಲೆ ಪ್ರೀತಿ, ವಿಶ್ವಾಸ, ಗೌರವ ಇದೆ. ಅದನ್ನು ಬೇಡ ಎನ್ನಲು ಸಾಧ್ಯವೇ? ಎಂದರು.

 

Category
ಕರಾವಳಿ ತರಂಗಿಣಿ