ನವದೆಹಲಿ: ''ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜೈಲಿನಲ್ಲಿ ಕಳೆದ ಸಮಯವು ಪ್ರಧಾನಿ ನರೇಂದ್ರ ಮೋದಿ ದೇಶದ ಉನ್ನತ ಹುದ್ದೆಯಲ್ಲಿರುವ ಅವಧಿಗೆ ಹತ್ತಿರದಲ್ಲಿದೆ'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂಸತ್ತಿನಲ್ಲಿ ಕಿಡಿ ಕಾರಿದ್ದಾರೆ. 'ವಂದೇ ಮಾತರಂ'ನ 150 ವರ್ಷಗಳನ್ನು ಆಚರಿಸುವ ಸಂದರ್ಭದಲ್ಲಿ ಲೋಕಸಭೆಯಲ್ಲಿ ಸೋಮವಾರ ನಡೆದ ಚರ್ಚೆಯ ಸಂದರ್ಭದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಸಂಸದೆ ಪ್ರಿಯಾಂಕಾ ವಾದ್ರಾ , ನೆಹರು ಅವರನ್ನು ಪದೇ ಪದೇ ಟೀಕಿಸಿದ ಪ್ರಧಾನಿ ಮತ್ತು ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತೀವ್ರ ವಾಗ್ದಾಳಿ ನಡೆಸಿದ ಪ್ರಿಯಾಂಕಾ'' ಮೋದಿ ಪ್ರಧಾನಿಯಾಗಿರುವಷ್ಟು ಅವಧಿ ನೆಹರು ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲಿನಲ್ಲಿದ್ದರು. ಆ ಬಳಿಕ 17 ವರ್ಷ ಪ್ರಧಾನಿಯಾಗಿ ದೇಶ ಆಳಿದರು. ನೀವು ಅವರನ್ನು ಎಷ್ಟೇ ಟೀಕಿಸಿ ಅವರು ಇಸ್ರೋ, ಆರಂಭಿಸದಿದ್ದರೆ 'ಮಂಗಳಯಾನ' ಸಾಧ್ಯವಾಗುತ್ತಿರಲಿಲ್ಲ. ಅವರು DRDO ಆರಂಭಿಸದಿದ್ದರೆ ತೇಜಸ್ ಇರುತ್ತಿರಲಿಲ್ಲ. ಅವರು IIT ಗಳು ಮತ್ತು IIM ಗಳನ್ನು ಆರಂಭಿಸದಿದ್ದರೆ ನಾವು ಐಟಿಯಲ್ಲಿ ಮುಂದೆ ಇರುತ್ತಿರಲಿಲ್ಲ. ಅವರು AIIMS ಆರಂಭಿಸದಿದ್ದರೆ, ಕೊರೊನಾದಂತಹ ಸವಾಲನ್ನು ನಾವು ಹೇಗೆ ಎದುರಿಸುತ್ತಿದ್ದೆವು?" ಎಂದು ಪ್ರಶ್ನೆಗಳ ಸುರಿಮಳೆಗೈದರು.
"ಪಂಡಿತ್ ಜವಾಹರಲಾಲ್ ನೆಹರು ದೇಶಕ್ಕಾಗಿ ಬದುಕಿದರು ಮತ್ತು ದೇಶ ಸೇವೆಗಾಗಿಯೇ ಕೊನೆಯುಸಿರೆಳೆದರು" ಎಂದು ವಯನಾಡ್ ಸಂಸದೆ ಹೇಳಿದರು. "ಸತ್ಯವೆಂದರೆ ಮೋದಿ ಅವರ ಆತ್ಮವಿಶ್ವಾಸ ಕುಸಿಯುತ್ತಿದೆ. ಅವರ ನೀತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ ಮತ್ತು ಅಧಿಕಾರದಲ್ಲಿರುವ ನನ್ನ ಸಹೋದ್ಯೋಗಿಗಳು ಮೌನವಾಗಿದ್ದಾರೆ ಏಕೆಂದರೆ, ಆಳವಾಗಿ, ಅವರು ಕೂಡ ಇದರಿಂದ ನಾಚಿಕೆಪಡುತ್ತಾರೆ. ಇಂದು, ದೇಶದ ಜನರು ಅತೃಪ್ತರು, ದುಃಖಿತರು ಮತ್ತು ಸಮಸ್ಯೆಗಳಿಂದ ಸುತ್ತುವರೆದಿದ್ದಾರೆ, ಮತ್ತು ನೀವು ಅವುಗಳನ್ನು ಪರಿಹರಿಸುತ್ತಿಲ್ಲ" ಎಂದು ಪ್ರಿಯಂಕಾ ವಾಗ್ದಾಳಿ ನಡೆಸಿದರು. "ಬಿಜೆಪಿಯವರು ಚುನಾವಣೆಗಾಗಿ, ನಾವು ದೇಶಕ್ಕಾಗಿ. ನಾವು ಎಷ್ಟೇ ಚುನಾವಣೆಗಳಲ್ಲಿ ಸೋತರೂ, ನಾವು ಇಲ್ಲಿ ಕುಳಿತು ನಿಮ್ಮ ಮತ್ತು ನಿಮ್ಮ ಸಿದ್ಧಾಂತದ ವಿರುದ್ಧ ಹೋರಾಡುತ್ತಲೇ ಇರುತ್ತೇವೆ. ನಾವು ನಮ್ಮ ದೇಶಕ್ಕಾಗಿ ಹೋರಾಡುತ್ತಲೇ ಇರುತ್ತೇವೆ. ನೀವು ನಮ್ಮನ್ನು ತಡೆಯಲು ಸಾಧ್ಯವಿಲ್ಲ" ಎಂದು ಗುಡುಗಿದರು.